- ಬೊಜ್ಜು ಕರಗಿಸದ ಪೊಲೀಸರಿಗೆ ಶಾಕ್..!
- ಹೊಟ್ಟೆ ಬಂದ ಖಾಕಿಗಳಿಗೆ ವರ್ಗಾವಣೆ ಫಿಕ್ಸ್
- ಇಲಾಖೆಯ ಹೊಸ ಆದೇಶದಿಂದ ಹೊಸ ಟೆನ್ಶನ್..!
ರಾಜ್ಯ ಪೊಲೀಸ್ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೊಜ್ಜು ಕರಗಿಸದ ಕಾರಣಕ್ಕೆ ದಿಢೀರ್ ವರ್ಗಾವಣೆ ಮಾಡಲಾಗಿದೆ. ಬಿಎಂಐ (ಬಾಡಿ ಮಾಸ್ ಇಂಡೆಕ್ಸ್ ) ಪ್ರಮಾಣ ಶೇ.29ಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಒಂದು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಮತ್ತೊಂದು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ, ಕಡೂರು, ಖಾನಾಪುರ, ಮೈಸೂರು, ಬೆಂಗಳೂರು, ಧಾರವಾಡ, ಥಣಿಸಂದ್ರ, ಯಲಹಂಕ, ಹಾಸನದ ಪೊಲೀಸ್ ತರಬೇತಿ ಶಾಲೆಗಳ ಪ್ರಾಂಶುಪಾಲರು, ತರಬೇತಿ ಅಧಿಕಾರಿಗಳು ಹಾಗೂ ಇತರೆ ಪೊಲೀಸ್ ಸಿಬ್ಬಂದಿಯನ್ನು ಪರಸ್ಪರ ವರ್ಗಾವಣೆ ಮಾಡಲಾಗಿದೆ.
ಪೊಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಏ. 30ರಂದು ನಡೆದ ಸಭೆಯ ನಿರ್ಧಾರದಂತೆ ಮೇ 2 ರಂದು ಸಿಬ್ಬಂದಿ ವರ್ಗಾವಣೆಗೆ ನಿರ್ದೇಶನ ನೀಡಲಾಗಿದೆ. ನಿಯೋಜಿಸಿದ ಮತ್ತೊಂದು ತರಬೇತಿ ಕೇಂದ್ರದಲ್ಲಿ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ದೇಹದ ತೂಕ ಹಾಗೂ ಸ್ಥೂಲಕಾಯ ಕಡಿಮೆ ಮಾಡಿಕೊಂಡ ಪ್ರಮಾಣಪತ್ರ ಒದಗಿಸಿದ ನಂತರ ಮರಳಿ ಮೂಲ ಸ್ಥಳಕ್ಕೆ ಹಾಜರಾಗಲು ಈ ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ.