ಅಮೆರಿಕ ಅಧ್ಯಕ್ಷೀಯ ಚುನಾವಣೆ ರಂಗೇರಿದ್ದು ಮಾಜಿ ಅಧ್ಯಕ್ಷ, ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ ಆಯೋಜಿಸಿದ್ದ ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್ ಹಿಲ್ ಗಲಭೆ ಇತ್ಯಾದಿ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದರು.
ಕಮಲಾ ಹ್ಯಾರಿಸ್ ಮಾರ್ಕ್ಸ್ವಾದಿಯಾಗಿದ್ದಾರೆ. ಅವರ ತಂದೆ ಮಾರ್ಕ್ಸ್ವಾದವನ್ನು ಕಲಿಸಿಕೊಟ್ಟಿದ್ದಾರೆ. ಅವರ ಹುಚ್ಚು ನೀತಿಯಿಂದ ದೇಶ ನಾಶವಾಗಿದೆ ಎಂದು ಟ್ರಂಪ್ ಟೀಕಿಸಿದರು.
ಡೊನಾಲ್ಡ್ ಟ್ರಂಪ್ ಲಕ್ಷಾಂತರ ಜನರನ್ನು ವಜಾಗೊಳಿಸಿದ್ದಾರೆ. ಕೆಟ್ಟ ಉದ್ಯೋಗ ನೀತಿಯಿಂದ ದೇಶ ಸಮಸ್ಯೆಗೆ ಸಿಲುಕಿತ್ತು. ಟ್ರಂಪ್ ಅವಧಿಯಲ್ಲಿ ಆಗಿದ್ದ ಅವ್ಯವಸ್ಥೆಯನ್ನು ನಮ್ಮ ಅವಧಿಯಲ್ಲಿ ನಾವು ಸ್ವಚ್ಛ ಮಾಡಿದ್ದೇವೆ ಎಂದು ಹ್ಯಾರಿಸ್ ತಿರುಗೇಟು ನೀಡಿದರು.
ಟ್ರಂಪ್ ವಾದ ಏನು?
ಕಮಲಾ ಹ್ಯಾರಿಸ್ ಅಧಿಕಾರಕ್ಕೆ ಬಂದರೆ ಅಮೆರಿಕ ವೆನೆಜುವೆಲಾ ಆಗಲಿದೆ. ನನ್ನ ಯೋಜನೆ ಉತ್ತಮ ಯೋಜನೆಯಾಗಿದೆ. ಅವರ ಬಳಿ ಯಾವುದೇ ಯಾವುದೇ ಯೋಜನೆ ಇಲ್ಲ ಮತ್ತು ಬೈಡೆನ್ ಅವರ ಯೋಜನೆಯನ್ನು ನಕಲು ಮಾಡಿದ್ದಾರೆ.
ಸಾಕುಪ್ರಾಣಿಗಳನ್ನು ಸೇವಿಸುವ ಹೈಟಿ ವಲಸಿಗರು ಅಮೆರಿಕ ಜನರು ಸಾಕಿದ್ದ ನಾಯಿ, ಬೆಕ್ಕುಗಳನ್ನು ತಿನ್ನುತ್ತಿದ್ದಾರೆ. ಬೈಡನ್ ಅವಧಿಯಲ್ಲಿ ಲಕ್ಷಾಂತರ ಕ್ರಿಮಿನಲ್ಗಳಿಗೆ ದೇಶಕ್ಕೆ ಬರಲು ಅವಕಾಶ ಸಿಕ್ಕಿದೆ. ಭಯೋತ್ಪಾದಕರು, ಡ್ರಗ್ ಡೀಲರ್ಗಳಿಗೆ ಬರಲು ಅವಕಾಶ ನೀಡಿ ಅವರ ಮತಗಳನ್ನು ಪಡೆಯುತ್ತಿದ್ದಾರೆ. ಅಕ್ರಮ ವಲಸಿಗರಿಂದ ದೇಶ ನಾಶವಾಗಲಿದೆ.
ನಾವು ಭಯಾನಕ ಆರ್ಥಿಕತೆಯನ್ನು ಹೊಂದಿದ್ದೇವೆ. ಹಣದುಬ್ಬರ ವಿಪರೀತ ಏರಿಕೆಯಾಗಿದೆ. ಬಹುಶಃ ಅಮರಿಕದ ಇತಿಹಾಸದಲ್ಲಿ ಇಷ್ಟೊಂದು ಕೆಟ್ಟ ಆರ್ಥಿಕತೆ ನೋಡೇ ಇಲ್ಲ. ನಾನು ಕ್ಯಾಪಿಟಲ್ ಹಿಲ್ ಮೇಲೆ ದಾಳಿಗೆ ಯಾವುದೇ ಪ್ರಚೋದನೆ ನೀಡಿಲ್ಲ. ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾತ್ರ ಮಾಡಿದ್ದೇನೆ.
ಕಮಲಾ ಹ್ಯಾರಿಸ್ ಹೇಳಿದ್ದೇನು?
ಟ್ರಂಪ್ ಪ್ರಚಾರ ಸಭೆಗೆ ಆಗಮಿಸುತ್ತಿರುವ ಜನರು ಕಾರ್ಯಕ್ರಮದ ಮಧ್ಯೆ ಬೇಸರದಿಂದ ತೊರೆಯುತ್ತಿದ್ದಾರೆ. ಇದನ್ನು ನೋಡಿದಾಗಲೇ ಜನರಿಗೆ ಅವರ ಮೇಲೆ ಇರುವ ನಂಬಿಕೆ ಏನು ಎನ್ನುವುದು ತಿಳಿಯುತ್ತೆ. ಟ್ರಂಪ್ ಯಾವುದೇ ಯೋಜನೆಯನ್ನು ಹೊಂದಿಲ್ಲ. ಸಮರ್ಥಿಸಿಕೊಳ್ಳಲು ಯೋಜನೆ ಬಗ್ಗೆ ಮಾತನಾಡುತ್ತಾರೆ.
ದೇಶದ ರಾಜಧಾನಿಯಲ್ಲಿ ಗಲಾಟೆ ನಡೆಸಲು ಟ್ರಂಪ್ ಭಾಷಣ ಮಾಡಿ ಹಿಂಸಾತ್ಮಕ ಗುಂಪನ್ನು ಪ್ರಚೋದಿಸಿದರು. ಟ್ರಂಪ್ಗೆ ರಿಪಬ್ಲಿಕನ್ ಪಕ್ಷದಲ್ಲೇ ಬೆಂಬಲ ಸಿಗುತ್ತಿಲ್ಲ. ಟ್ರಂಪ್ ಅವಧಿಯಲ್ಲಿ ಕೆಲಸ ಮಾಡಿದ 200 ಕ್ಕೂ ಹೆಚ್ಚು ರಿಪಬ್ಲಿಕನ್ಗಳು ನನ್ನನ್ನು ಬೆಂಬಲಿಸಿದ್ದಾರೆ. ವಿಶ್ವದ ನಾಯಕರು ಟ್ರಂಪ್ ನೋಡಿ ನಗುತ್ತಿದ್ದಾರೆ. ಟ್ರಂಪ್ 81 ಮಿಲಿಯನ್ ಜನರನ್ನು ತೆಗೆದು ಹಾಕಿ ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ.