ತುಮಕೂರು: ತುಮಕೂರು ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೀಡಿದ ನೋಟೀಸ್ ಅನ್ನು ವಾಪಸ್ ಪಡೆಯಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ”ಸಿದ್ದಗಂಗಾ ಮಠದ ಬಳಿ ಕೆಐಎಡಿಬಿಗೆ ಸೇರಿದ ಕೆರೆ ಇದೆ. ಆ ಕೆರೆಯಿಂದ ನೀರನ್ನು ಮಠದವರು ತೆಗೆದುಕೊಂಡಿದ್ದರು. ಅದಕ್ಕೆ ಬಿಲ್ ಕೊಡುವಂತೆ ನೋಟಿಸ್ ನೀಡಲಾಗಿತ್ತು. ಸಿದ್ದಗಂಗಾ ಮಠವು ವಿಶ್ವಕ್ಕೆ ಮಾದರಿಯಾದ ಮಠ. ಹತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಬಸವಣ್ಣರ ತತ್ವದ ಅಡಿ ದಾಸೋಹ ಮಾಡುತ್ತಿರುವ ಮಠ ಅದಾಗಿದೆ. ಮಠವು ನೀರು ಪಡೆದುಕೊಂಡರೂ ತಪ್ಪಲ್ಲ. ಇಲಾಖೆಯ ಮುಖ್ಯ ಅಭಿಯಂತರರು ಮಠದ ಜೊತೆ ಮಾತನಾಡಿದ್ದಾರೆ” ಎಂದರು.
”ನೀರಿನ ಬಿಲ್ ಅನ್ನು ಮನ್ನಾ ಮಾಡುತ್ತೇವೆ. ಅವರು ಬಳಸಿದ್ದರೂ ತಪ್ಪಲ್ಲ. ಸ್ವಾಮೀಜಿ ಜೊತೆ ಮಾತನಾಡುತ್ತೇನೆ. ನೀರು ಬಳಸಿಲ್ಲ ಎಂದರೆ ಆಯ್ತು, ಬಳಸಿದ್ದರೂ ತಪ್ಪಲ್ಲ. ಮಠದವರು ಸ್ವಂತಕ್ಕೆ ನೀರನ್ನು ಬಳಸಲ್ಲ. ಅವರು ಇನ್ಮುಂದೆ ಬಳಸಿದರೂ ತಪ್ಪಿಲ್ಲ. 10 ಸಾವಿರ ಮಕ್ಕಳಿಗೆ ಅನ್ನ, ಶಿಕ್ಷಣ ಕೊಡುತ್ತಾರೆ. ಒಂದು ವೇಳೆ ನೀರು ಬಳಸದೇ ಇದ್ದರೂ ನೋಟಿಸ್ ಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗದುಕೊಳ್ಳುತ್ತೇನೆ” ಎಂದು ಸಚಿವರು ತಿಳಿಸಿದರು.
ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ. ವಿದ್ಯುತ್ ಬಿಲ್ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಎಡಿಬಿ ಪತ್ರ ಬರೆದಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ವಿದ್ಯುತ್ ಬಿಲ್ ಅನ್ನು ಭರಿಸುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ವಿದ್ಯುತ್ ಬಿಲ್ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಬರೆದಿರುವ ಪತ್ರ ಬರೆಲಾಗಿತ್ತು.
ಪತ್ರದಲ್ಲೇನಿದೆ?
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ತಾಲೂಕು ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಯವರೆಗೆ ಪೈಪ್ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಸಕ್ತ 2024ನೇ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಸದರಿ ಕೆರೆಯಿಂದ ನೀರನ್ನು ಸಿದ್ದಗಂಗಾ ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿರುತ್ತದೆ.
2023ರ ಅ.31ರಿಂದ ಹಾಗೂ 2024ರ ಮಾ.02ರವರೆಗೆ ಒಟ್ಟು 70,31,438 ರೂ. ವಿದ್ಯುತ್ ಬಿಲ್ಗಳನ್ವಯ ಬೆಸ್ಕಾಂಗೆ ಹಣ ಪಾವತಿಸಬೇಕಾಗಿರುತ್ತದೆ. ಪ್ರಸ್ತುತ ಮಂಡಳಿಯು ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ನೀರು ಸರಬರಾಜಿನ ವಿದ್ಯುತ್ ಬಳಕೆಯ ವೆಚ್ಚವನ್ನು ಸಿದ್ಧಗಂಗಾ ಮಠದ ವತಿಯಿಂದ ಭರಿಸುವಂತೆ ತಿಳಿಸಲು ಕೆಐಎಡಿಬಿ ನಿರ್ದೇಶಿಸಿದೆ ಎಂದು ಬರೆಯಲಾಗಿದೆ.