ವಿಧಾನಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಅವರ ನೇತೃತ್ವದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ನಿಯೋಗವು ಪಾವಗಡದ ಸೋಲಾರ್ ಪಾರ್ಕ್ಗೆ ಬುಧವಾರ ಭೇಟಿ ನೀಡಿತ್ತು.
ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕರಾದ ಟಿ.ಡಿ. ರಾಜೇಗೌಡ ಅವರನ್ನು ಒಳಗೊಂಡಂತೆ ಶಾಸಕರಾದ ಯು.ಬಿ.ಬಣಕಾರ್, ಡಿ.ಜಿ.ಶಾಂತನಗೌಡ, ಹೆಚ್.ವಿ.ವೆಂಕಟೇಶ್ ಹಾಗೂ ವಿಧಾನ ಪರಿಷತ್ ಸದ್ಯರಾದ ಉಮಾಶ್ರೀ, ಭಾರತಿ ಶೆಟ್ಟಿ ಅವರಿದ್ದ ನಿಯೋಗಕ್ಕೆ ಅಧಿಕಾರಿಗಳು ಪಾರ್ಕ್ನ ವೈಶಿಷ್ಟ್ಯತೆಗಳ ಬಗ್ಗೆ ವಿವರ ನೀಡಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್, “ಇಂಧನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪಾವಗಡದ ಸೋಲಾರ್ ಪಾರ್ಕ್ ಮಾದರಿಯಾಗಿದೆ. ಇದೇ ರೀತಿ ರಾಜ್ಯದ ಬೇರೆ ಭಾಗದಲ್ಲೂ ಬೃಹತ್ ಸೋಲಾರ್ ಪಾರ್ಕ್ ಅಭಿವೃದ್ಧಿಯಾಗಬೇಕು,” ಎಂದು ಹೇಳಿದರು. ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಕೆ.ಎಸ್.ಪಿ.ಡಿ.ಸಿ.ಎಲ್.ನ ಸಿಇಓ ಅಮರನಾಥ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.