ಕೊಚ್ಚಿ ಹೋಗಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಗೇಟ್ನಿಂದ ಹೊರಹರಿವನ್ನು ತಡೆಯಲು ಜಿಂದಾಲ್ನಿಂದ ಮೂರು ಸ್ಟಾಪ್ ಲಾಗ್ ಗೇಟ್ಗಳು ಪೊಲೀಸ್ ಸರ್ಪಗಾವಲಿನಲ್ಲಿ ಜಲಾಶಯಕ್ಕೆ ಬಂದಿದ್ದು, ಮಧ್ಯಾಹ್ನದ ವೇಳೆಗೆ ಕೆಲಸ ಗೇಟ್ ಅಳವಡಿಸುವ ಕೆಲಸ ಆರಂಭವಾಗಲಿದೆ. ತಡರಾತ್ರಿ ಬರಬೇಕಿದ್ದ ಸ್ಟಾಪ್ ಲಾಗ್ ಗೇಟ್ಗಳಿಗೆ ಮಳೆ ಅಡ್ಡಿಯಾಗಿತ್ತು. ಇದರಿಂದಾಗಿ ಬೆಳಗ್ಗೆ ಗೇಟ್ ಗಳನ್ನು ತರಲಾಯಿತು. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಗೇಟ್ ಕೂರಿಸಲು ಕೊಟ್ಟ ಮೂರು ದಿನದ ಯೋಜನೆಯ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ.
ಒಂದು ಸ್ಟಾಪ್ ಲಾಗ್ ಗೇಟ್ ಹಾಕಿದ ಬಳಿಕ ವೆಲ್ಡಿಂಗ್ ಮಾಡಬೇಕು. ಅದು 40 ನಿಮಿಷದ ಒಳಗೆ ವೆಲ್ಡಿಂಗ್ ಮುಗಿಸಿ ಮತ್ತೊಂದು ಸ್ಟಾಪ್ ಲಾಗ್ ಗೇಟ್ ಹಾಕಬೇಕು. ಇಲ್ಲದೇ ಇದ್ದರೇ ಮತ್ತೇ ಮಾಡಿದ ಕೆಲಸವೆಲ್ಲಾ ವ್ಯರ್ಥ ಆಗಲಿದೆ. ಹೀಗಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಕಾರ್ಯಗಳನ್ನ ಮುಗಿಸಿಕೊಂಡು, ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು, ಶುಕ್ರವಾರ ಶುಭ ಸುದ್ದಿ ಕೊಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಮಾತನ್ನಾಡಿದ್ದಾರೆ. ಮೊದಲ ಗೇಟ್ ಕೂರಿಸೋದು ದೊಡ್ಡ ಚಾಲೆಂಜ್ ಆಗಿದೆ. ಅದನ್ನ ಹಾಕಿದ ನಂತರದಲ್ಲಿ ಅಷ್ಟೊಂದು ಕಷ್ಟ ಆಗಲ್ಲ. ನನ್ನ ಜೀವನದಲ್ಲಿ ಇದೊಂದು ದೊಡ್ಡ ಚಾಲೆಂಜ್. ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಒಳ್ಳೆಯದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟು 5 ಸ್ಟಾಪ್ ಲಾಗ್ ಗೇಟ್ಗಳನ್ನ ಅಳವಡಿಕೆ ಮಾಡಲು ಕಾರ್ಯ ಪ್ರಾರಂಭ ಮಾಡಿದ್ದೇವೆ. ಒಂದು ಸ್ಟಾಪ್ ಲಾಗ್ ಗೇಟ್ 25 ಟಿಎಂಸಿ ನೀರನ್ನ ತಡೆಯುತ್ತದೆ. ಒಟ್ಟು 5 ಗೇಟ್ಗಳನ್ನ ಅಳವಡಿಕೆ ಮಾಡಲಾಗುತ್ತದೆ. ಅವಶ್ಯಕತೆ ಇದ್ದರೆ ಇನ್ನೂ ಮೂರು ಗೇಟ್ಗಳನ್ನ ಅಳವಡಿಕೆ ಮಾಡುತ್ತೇವೆ. ಒಟ್ಟು 90 ಟಿಎಂಸಿ ನೀರನ್ನು ಸಂಗ್ರಹ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.