2024-25 ಸಾಲಿನ ಕೇಂದ್ರ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ರುಪಾಯಿ ಅನುದಾನ ನಿಗದಿಪಡಿಸಲಾಗಿದೆ. ಇದು ಈವರೆಗೆ ರೈಲ್ವೆ ಇಲಾಖೆಗೆ ಕೇಂದ್ರ ಬಜೆಟ್ನಲ್ಲಿ ನೀಡಿದ ಅತ್ಯಧಿಕ ಅನುದಾನವಾಗಿದೆ. ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ನಲ್ಲಿ 2.52 ಲಕ್ಷ ಕೋಟಿ ರುಪಾಯಿ ನೀಡಲಾಗಿತ್ತು. ಅದನ್ನು ಈಗ ಇನ್ನಷ್ಟು ಹೆಚ್ಚಿಸಲಾಗಿದೆ. ಕಳೆದ ವರ್ಷದ ಬಜೆಟ್ನಲ್ಲಿ 2.4 ಲಕ್ಷ ಕೋಟಿ ರುಪಾಯಿಗಳನ್ನು ರೈಲ್ವೆಗೆ ನೀಡಲಾಗಿತ್ತು. ಈ ಮೊದಲು ರೈಲ್ವೆ ಇಲಾಖೆಗೆ ಪ್ರತ್ಯೇಕ ಬಜೆಟ್ ಇತ್ತು. ನರೇಂದ್ರ ಮೋದಿ ಅದನ್ನು ರದ್ದುಪಡಿಸಿದ್ದಾರೆ. ಕೇಂದ್ರ ಬಜೆಟ್ನಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಕರ್ನಾಟಕ ರಾಜ್ಯದ ರೈಲು ಯೋಜನೆಗಳನ್ನು ಜಾರಿಗೊಳಿಸಲು 7500 ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ರಾಜ್ಯ ರೈಲ್ವೇ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.