ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಏಳನೇ ಬಜೆಟ್ ಮಂಡಿಸಿದ್ದಾರೆ. ಒಟ್ಟು 48.21 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಆಂಧ್ರ ಪ್ರದೇಶ ಹಾಗೂ ಬಿಹಾರ ರಾಜ್ಯಕ್ಕೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಇದು ಇತರೆ ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನು ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
2024-25ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆಂಧ್ರ ಪ್ರದೇಶ, ಬಿಹಾರ್ಗೆ ಮಾತ್ರ ಈ ಬಜೆಟ್ ಸೀಮಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ. ಇನ್ನು ಅತ್ತ ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮಾತನಾಡಿದ್ದು, ಆಂಧ್ರ, ಬಿಹಾರಕ್ಕೆ ಹೆಚ್ಚು ನೆರವು ಕೊಟ್ಟಿದ್ದಾರೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಹೆಚ್ಚು ಅಭಿವೃದ್ಧಿಗೆ ಒತ್ತು ನೀಡುವುದಕ್ಕೆ ಕಾರಣವೇನು? ರಾಜ್ಯ ಇಬ್ಬಾಗವಾದಗ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಘೋಷಣೆ ಮಾಡಿದ್ದೇ ಕಾಂಗ್ರೆಸ್ ಆದರೆ ಜಾರಿಗೆ ತಂದಿರಲಿಲ್ಲ. ಈಗ ಪ್ರಧಾನಿ ಮೋದಿಯವರು ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯದ ಯೋಜನೆಗಳು ಯಾವುದು ಇಲ್ಲ ಎನ್ನುವ ಆರೋಪವಿದೆ. ಈ ರೀತಿಯ ಟೀಕೆ ಮಾಡುವುದು ಸಹಜ. ಬಜೆಟ್ ಮಂಡನೆ ವೇಳೆ ಹೆಸರು ಹೇಳದೆ ಇದ್ದರೂ ಸಹ ರಾಜ್ಯಗಳಿಗೆ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಕನ್ನಡನಾಡಿನ ಜನತೆಗೆ ನಾನು ಮನವಿ ಮಾಡುತ್ತೇನೆ. ಕಾಂಗ್ರೆಸ್ ನವರು ಮೊದಲು ಟೀಕೆ ಮಾಡುವುದನ್ನು ನಿಲ್ಲಿಸಬೇಕು. ನಾವು ಕರ್ನಾಟಕಕ್ಕೆ ಹೋಗಲು ಯಾಕೆ ಬಂದ್ರಿ ಅಂತಾರೆ. ಈಗ ರಾಜ್ಯಕ್ಕೆ ಏನು ತಂದರು ಎಂದು ಕೇಳುತ್ತಾರೆ. ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಯೋಜನೆಗಳನ್ನು ತರಲು ನಾನು ಶ್ರಮಿಸುತ್ತೇನೆ. ಒಂದು ತಿಂಗಳಲ್ಲೇ ಎಲ್ಲವನ್ನು ತಂದು ಇಳಿಸಲು ಸಾಧ್ಯವಿಲ್ಲ. ಯೋಜನೆಗಳನ್ನು ತರುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದರು.