ಉತ್ತರ ಪ್ರದೇಶದ ಹಾಥರಸ್ ನಲ್ಲಿ ಸತ್ಸಂಗ ಮಾಡಿ 121ರ ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಕುರಿತಾದ ಹೊರ ಬರುತ್ತಿರುವ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿವೆ. ಲೈಂಗಿಕ ಕಿರುಕುಳ ಪ್ರಕರಣ ಎದುರಿಸುತ್ತಿರುವ ಭೋಲೆ ಬಾಬಾ ಕೋಟ್ಯಧೀಶನಾಗಿದ್ದು, ಫೈವ್ಸ್ಟಾರ್ ಆಶ್ರಮ ಹೊಂದಿದ್ದಾನೆ.
ಉತ್ತರ ಪ್ರದೇಶದ ಮೈನಪುರಿಯಲ್ಲಿ 13 ಎಕರೆಯಲ್ಲಿನ ಐಷಾರಾಮಿ ಆಶ್ರಮವು ಅಮೆರಿಕದ ಶ್ವೇತಭವನವನ್ನು ಹೋಲುತ್ತದೆ. ಇದರ ಮೌಲ್ಯ 50 ಕೋಟಿ ರೂಪಾಯಿಗೂ ಅಧಿಕವಿದೆ. ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾನ ಮೂಲ ಹೆಸರು ಸೂರಜ್ ಪಾಲ್ ಆಗಿದ್ದು, ಆಶ್ರಮದಲ್ಲಿ ಹಲವು ಕೋಣೆಗಳಿದ್ದು, ಬಾಬಾನಿಗೆ ಮೀಸಲಾಗಿರುವ 6 ಕೋಣೆಗಳು ಹೈಟೆಕ್ ಆಗಿವೆ. 6 ಕೋಣೆಗಳನ್ನು ಸೇವಾದಾರರಿಗೆ ನೀಡಲಾಗಿದೆ.
ಉತ್ತರಪ್ರದೇಶ ಅಲ್ಲದೆ ಮಧ್ಯಪ್ರದೇಶ, ರಾಜಸ್ಥಾನ ಸೇರಿ ಬೇರೆ ಕಡೆಯೂ ಆಸ್ತಿ ಹೊಂದಿದ್ದಾನೆ. ಇತರೆ ಬಾಬಾಗಳಂತೆ ಕೇಸರಿ ಉಡುಗೆಯನ್ನು ಭೋಲೆ ಬಾಬಾ ತೊಡುವುದಿಲ್ಲ, ಯಾವಾಗಲೂ ಶುಭ್ರ ವಸ್ತ್ರಧಾರಿಯಾಗಿರುತ್ತಾರೆ. ಬಿಳಿ ಶೂಗಳನ್ನು ಧರಿಸುತ್ತಾರೆ ಮತ್ತು ಸತ್ಸಂಗದಲ್ಲಿ ತಮ್ಮ ಪತ್ನಿ ಜತೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಜಾಟ್ ಸಮುದಾಯಕ್ಕೆ ಸೇರಿರುವ ಬಾಬಾ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ ಮುಸ್ಲಿಮರೂ ಇವರು ಅನುಯಾಯಿಗಳಾಗಿದ್ದಾರೆ.