ಉತ್ತರ ಪ್ರದೇಶದ ಸಂಭಲ್ನಲ್ಲಿರುವ ಶಾಹಿ ಜಾಮಾ ಮಸೀದಿಯ ಸುತ್ತ ಜಾಗ ಒತ್ತುವರಿ ತೆರವು ಮಾಡುವ ವೇಳೆ 46 ವರ್ಷಗಳಷ್ಟು ಹಿಂದಿನ ಹಳೇ ದೇಗುಲ ಪತ್ತೆಯಾಗಿದೆ.
1978ರಲ್ಲಿ ಸಂಭಲ್ನಲ್ಲಿ ಹಿಂಸಾಚಾರ ನಡೆದಿತ್ತು. ಕೋಮುಗಲಭೆ ನಡೆದ ಕಾರಣಕ್ಕೆ ಅಲ್ಲಿನ ಹಿಂದೂಗಳು ವಲಸೆ ಹೋಗಿದ್ದು, ಆಗ ಈ ದೇವಾಲಯವು ಮುಚ್ಚಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಇದೀಗ ಮಸೀದಿ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ಸ್ಥಳಗಳನ್ನು ಕೂಡ ಈ ಕಾರ್ಯಾಚರಣೆಯು ಒಳಗೊಂಡಿತ್ತು. ಈ ವೇಳೆ ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಪತ್ತೆಯಾಗಿವೆ.
ಈ ಪ್ರದೇಶದಲ್ಲಿ ದೇವಸ್ಥಾನವನ್ನು ಅತಿಕ್ರಮಣ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿರುವುದರ ಕುರಿತು ಸಂಭಲ್ ಸಿಒ ಅನುಜ್ ಕುಮಾರ್ ಚೌಧರಿ ಹೇಳಿದ್ದು, ನಂತರ ಆಳವಾದ ಕಾರ್ಯಾಚರಣೆ ನಡೆಸಿದಾಗ ಈ ಹಳೆಯ ದೇವಾಲಯ ಪತ್ತೆಯಾಗಿದೆ ಎಂದಿದ್ದಾರೆ.
ಹೆಚ್ಚುವರಿ ಎಸ್ಪಿ ಶ್ರೀಶ್ಚಂದ್ರ ಮಾತನಾಡಿ ಕೆಲವರು ಮನೆ ನಿರ್ಮಿಸಿ ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ಶಿಥಿಲಾವಸ್ತೆಯಲ್ಲಿದೆ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು. ಕಾರಣಾಂತರಗಳಿಂದ ಅವರು ಈ ಪ್ರದೇಶವನ್ನು ತೊರೆದು ವಲಸೆ ಹೋದರು ಎಂಬ ಮಾಹಿತಿ ಲಭ್ಯವಾಗಿದೆ. ದೇವಾಲಯದ ಸಮೀಪದಲ್ಲಿಯೇ ಇರುವ ಪುರಾತನ ಬಾವಿಯ ಬಗ್ಗೆಯೂ ಮಾಹಿತಿ ಇದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.