ಉತ್ತರ ಪ್ರದೇಶದ ಸಂಭಾಲ್ ನ ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿಚಾರವಾಗಿ ನಡೆದಿದ್ದ ಹಿಂಸಾಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನ ಮಾರ್ಗಮಧ್ಯೆಯೇ ಪೊಲೀಸರು ತಡೆದಿದ್ದಾರೆ.
ಸ್ಥಳೀಯರಲ್ಲದವರು ಉತ್ತರ ಪ್ರದೇಶದ ಸಂಭಾಲ್ಗೆ ಭೇಟಿ ನೀಡುವಂತಿಲ್ಲ ಎಂಬ ನಿರ್ಬಂಧದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾರನ್ನು ಘಾಜಿಪುರ ಗಡಿಯಲ್ಲೇ ಪೊಲೀಸರು ತಡೆಹಿಡಿದಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕನಾಗಿ ಸಂಭಾಲ್ಗೆ ಭೇಟಿ ನೀಡೋದು ನನ್ನ ಹಕ್ಕು, ಪೊಲೀಸರ ಜೊತೆ ನಾನೊಬ್ಬನೇ ತೆರಳಲು ಸಿದ್ಧ ಇದ್ದೇನೆ. ಆದ್ರೂ, ನನಗೆ ಅವಕಾಶ ನಿರಾಕರಿಸಲಾಗ್ತಿದೆ ಎಂದು ಕಿಡಿಕಾರಿದರು.
ಇದು ವಿಪಕ್ಷ ನಾಯಕನ ಸಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿದೆ. ಬಿಜೆಪಿ ಸತ್ಯ ಮತ್ತು ಸೋದರತ್ವವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸುತ್ತಿದೆ. ಇದು ಹೊಸ ಹಿಂದೂಸ್ತಾನ, ಅಂಬೇಡ್ಕರ್ ಅವರ ಸಂವಿಧಾನ ಮುಗಿಸುವ ಪ್ರಯತ್ನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿ ಕಿಡಿ ಕಾರಿದರು.