ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರ ನಿಕಟವರ್ತಿ ಎಂದು ಪರಿಗಣಿಸಲಾದ ಸಾಮೂಹಿಕ ಅತ್ಯಾಚಾರದ ಆರೋಪಿ ಮೊಯೀದ್ ಖಾನ್ ಎಂಬುವನ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜಿಲ್ಲಾಡಳಿತ ನೆಲಸಮಗೊಳಿಸಿದೆ.
ಆರೋಪಿ ಮೊಯೀದ್ ಖಾನ್ ಒಡೆತನದ ‘ಅಕ್ರಮ’ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಕೆಡವಲು ಸ್ಥಳೀಯ ಆಡಳಿತ ಬುಲ್ಡೋಜರ್ಗಳನ್ನು ನಿಯೋಜಿಸಿತ್ತು. ಇದಲ್ಲದೇ ಮೊಯೀದ್ ಖಾನ್ ಮಾಡಿರುವ ಸ್ಮಶಾನದ ಅಕ್ರಮ ಒತ್ತುವರಿಯನ್ನು ಕೂಡ ಆಡಳಿತ ತೆಗೆದು ಹಾಕಲಿದೆ. ಮಾಹಿತಿ ಪ್ರಕಾರ, ಮಂಗಳವಾರ ಅಕ್ರಮ ಒತ್ತುವರಿ ತೆರವಿಗೆ 24 ಗಂಟೆಗಳ ಕಾಲಾವಕಾಶವನ್ನು ಆಡಳಿತ ಮಂಡಳಿ ನೀಡಿದೆ.
ಇದೆಲ್ಲದರ ನಡುವೆ ಮೊಹಮ್ಮದ್ ಮೊಯೀದ್ ಖಾನ್ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿದೆ. ಶಾಪಿಂಗ್ ಕಾಂಪ್ಲೆಕ್ಸ್ ಧ್ವಂಸಕ್ಕೆ ತಡೆ ಕೋರಿ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು. ನಾಳೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಆದರೆ ಜಿಲ್ಲಾಡಳಿತ ಇವತ್ತೇ ‘ಅಕ್ರಮ’ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಕೆಡವಲು ಕ್ರಮ ಕೈಗೊಂಡಿದೆ.
ಇದಲ್ಲದೇ ಇಂದು ಫೈಜಾಬಾದ್ ನ್ಯಾಯಾಲಯದಲ್ಲಿ ಮೊಯೀದ್ ಖಾನ್ ಜಾಮೀನಿಗೆ ಸಂಬಂಧಿಸಿದಂತೆ ವಿಚಾರಣೆ ಕೂಡ ನಡೆಯಲಿದೆ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಎಸ್ಪಿ ಮುಖಂಡ ಮೊಯೀದ್ ಖಾನ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯ ಮೇಲೆ ಎರಡು ತಿಂಗಳಿಂದ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಿಷಯ ಬಹಿರಂಗವಾಗಿದ್ದು ಹೇಗೆ?
ಅಪ್ರಾಪ್ತ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ಈ ವಿಷಯ ಬೆಳಕಿಗೆ ಬಂದಿತ್ತು. ಮನೆಯವರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿದ್ದರು, ವೈದ್ಯಕೀಯ ಪರೀಕ್ಷೆಯ ನಂತರ ಆಕೆ ಗರ್ಭಿಣಿ ಎಂದು ತಿಳಿದುಬಂದಿತ್ತು. ಇದಾದ ನಂತರ ಬಾಲಕಿ ನಡೆದ ವಿಷಯವನ್ನು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಮುಖ ಆರೋಪಿ ಎಸ್ಪಿ ನಾಯಕ ಮೊಯೀದ್ ಖಾನ್ ವಿಷಯ ವಿಧಾನಸಭೆಯಲ್ಲಿಯೂ ಸದ್ದು ಮಾಡಿತ್ತು.
ಈ ಪ್ರಕರಣದಲ್ಲಿ ಆರೋಪಿ ಮೊಯೀದ್ಖಾನ್ನ ಬೇಕರಿಯನ್ನು ಜಿಲ್ಲಾಡಳಿತ ಬುಲ್ಡೋಜರ್ ಮೂಲಕ ನೆಲಸಮ ಮಾಡಿತ್ತು. ಅಲ್ಲದೆ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಆರೋಪಿಯ ಬೇಕರಿ ಮೇಲೆ ದಾಳಿ ನಡೆಸಿ ಎಲ್ಲ ಸಾಮಾನುಗಳನ್ನು ವಶಪಡಿಸಿಕೊಂಡು ಆತನ ಬೇಕರಿಗೆ ಸೀಲ್ ಹಾಕಿದ್ದಾರೆ.