ವಾಲ್ಮೀಕಿ ನಿಗಮದ ಹಗರಣದ ಸಂಬಂಧ ಇ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡಗಳು ಹೊರಕ್ಕೆ ಬರಲಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ.
ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದಂತೆ ಈ ಸರ್ಕಾರ ವರ್ತಿಸುತ್ತಿದೆ. ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಬುಡಕಟ್ಟು ಸಮುದಾಯ, ಪರಿಶಿಷ್ಟ ಸಮುದಾಯಕ್ಕೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಪಡಿಸುವ ಉದ್ದೇಶದಿಂದ ರಚಿಸಲಾಗಿತ್ತು ಎಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಎಸ್ಸಿ, ಎಸ್ಟಿ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಹಲವು ತಿಂಗಳಿನಿಂದ ಬಿಜೆಪಿ ಹೋರಾಟ ನಡೆದಿದೆ.
ನಾಗೇಂದ್ರ ಅವರ ಮನೆಯ ಮೇಲೆ, ಆಸ್ತಿಗಳ ಮೇಲೆ ಇ.ಡಿ. ದಾಳಿ ಮಾಡಿದೆ. ಅನೇಕ ದಾಖಲಾತಿಗಳ ಪರಿಶೀಲನೆ ನಡೆದಿದೆ, ಯೂನಿಯನ್ ಬ್ಯಾಂಕಿನವರು ಸಿಬಿಐಗೆ ದೂರು ಕೊಟ್ಟ ಕಾರಣ ಅದರ ಆಧಾರದಲ್ಲಿ ಇ.ಡಿ. ದಾಳಿ ನಡೆಯುತ್ತಿರಬಹುದು, ಸರ್ಕಾರ ಕೂಡ ಈ ದೊಡ್ಡ ಹಗರಣದ ಭಾಗೀದಾರ ಎಂದು ಶ್ರೀರಾಮುಲು ಆರೋಪಿಸಿದರು.