ರಾಜ್ಯದೆಲ್ಲೆಡೆ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ಗುರುವಾರ ನಗರದ ಶಾಸಕರ ಭವನದಲ್ಲಿ ವಾಲ್ಮೀಕಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ನಮಿಸಿದರು. ನಗರದಲ್ಲಿ ನಡೆದ ಜಯಂತಿ ಸಮಾರಂಭದಲ್ಲಿ ವಾಲ್ಮೀಕಿ ಜ್ಯೋತಿಯನ್ನ ಸಿಎಂ ಬರಮಾಡಿಕೊಂಡರು. ಸಚಿವ ರಾಜಣ್ಣ, ಶಾಸಕ ದದ್ದಲ್, ಸಮುದಾಯದ ಸ್ವಾಮೀಜಿ ಸೇರಿ ಹಲವರು ಭಾಗಿದ್ದರು. ಪಾದಯಾತ್ರೆ ಮೂಲಕ ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮಕ್ಕೆ ತೆರಳಿದ ಸಿಎಂಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ವಿವಿಧ ಕಲಾತಂಡಗಳಿಂದ ನೃತ್ಯದ ಮೂಲಕ ವಿಧಾನಸೌಧಕ್ಕೆ ಸಿಎಂ ಆಗಮಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ನಂತರ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರದುರ್ಗದ ಕಿಲಾರೆ ಜೋಗಯ್ಯ, ಚಾಮರಾಜನಗರದ ಡಾ.ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಕೇಂದ್ರದ ಕೆ.ಎಸ್.ಮೃತ್ಯುಂಜಯ, ಕಲಬುರಗಿಯ ರತ್ನಮ್ಮ ಬಿ ಸೋಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸರ್ಕಾರ ಪ್ರತಿ ವರ್ಷದಂತೆ ವಾಲ್ಮೀಕಿ ಜಯಂತಿ ಆಚರಣೆ ಮೂಲಕ ಸಮುದಾಯವನ್ನ ಜಾಗೃತಿ ಮಾಡುತ್ತದೆ. ಸರ್ಕಾರದ ಸೌಲಭ್ಯ ಸಮುದಾಯದವರು ಪಡೆಯಬೇಕು ಎಂದು ತಿಳಿಸಿದರು. ಸಿದ್ದರಾಮಯ್ಯ ಸರ್ಕಾರದ ಎರಡು ಅವಧಿಯಲ್ಲಿ ಎಸ್ಟಿ ಸಮುದಾಯದ ಪ್ರಗತಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ವಸತಿ ಶಾಲೆ, ವಿದೇಶ ವ್ಯಾಸಂಗ ಸೇರಿ ಹಲವು ಕಾರ್ಯಕ್ರಮಗಳನ್ನ ಸರ್ಕಾರ ಮಾಡಿದೆ.
ಎಸ್ಸಿಎಸ್ಪಿ- ಟಿಎಸ್ಪಿ ಅನುದಾನ ಮೀಸಲಿಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಎಸ್ಸಿ-ಎಸ್ಟಿ ಸಮುದಾಯಗಳಿಗೆ ಹಾಸ್ಟೆಲ್ ಕೊರತೆ ಇದೆ. ಹಾಸ್ಟೆಲ್ ಹೆಚ್ಚು ಕೊಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು. 11 ಸಾವಿರ ಕೋಟಿ ಈ ವರ್ಷ ಎಸ್ಟಿ ಸಮುದಾಯಕ್ಕೆ ಮೀಸಲು ಸರ್ಕಾರ ಇರಿಸಿದೆ. ಬಿಜೆಪಿ ಸರ್ಕಾರದಲ್ಲಿ ಅನೇಕ ಯೋಜನೆ ಸ್ಥಗಿತ ಮಾಡಿದೆ. ಬಿಜೆಪಿ ಸರ್ಕಾರ ವಿದ್ಯಾರ್ಥಿ ವೇತನ ಕಡಿತ ಮಾಡಿತ್ತು. ವಿದ್ಯಾರ್ಥಿ ವೇತನವನ್ನ ಮತ್ತೆ ಸಿಎಂ ಅವರು ನೀಡಬೇಕು ಎಂದು ಮನವಿ ಮಾಡಿದರು.