ಶ್ರಾವಣವು ಹಬ್ಬಗಳ ಮಾಸವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರಪಂಚಮಿ. ಇದರ ನಂತರ ಪೌರ್ಣಮಿಗಿಂತ ಮೊದಲು ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಮ್ಮೆ ಶುಕ್ರವಾರ ಹುಣ್ಣಿಮೆ ಬಂದರೆ ಅಂದೇ ವರಮಹಾಲಕ್ಷ್ಮೀ ವ್ರತ. ಈ ಶುಕ್ರವಾರಕ್ಕೆ ‘ಸಂಪತ್ ಶುಕ್ರವಾರ’ ಎಂಬ ಹೆಸರೂ ಇದೆ. ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.
‘ಲಕ್ಷ್ಮೀ’ ಎಂದರೆ ಎಲ್ಲವನ್ನೂ ಯಾವಾಗಲೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾಗಿರುವ ಭಗವಂತನೊಡನೆ ನಿತ್ಯಯೋಗವನ್ನು ಹೊಂದಿ ಸರ್ವಜ್ಞಳಾಗಿರುವಾಕೆಯೇ ‘ಲಕ್ಷ್ಮೀ’. ಲಕ್ಷ್ಮೀ ಸಂಪತ್ತಿನ ಅಧಿದೇವತೆ, ಅವಳ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮೀ, ಕೀರ್ತಿಲಕ್ಷ್ಮಿ, ಮೋಕ್ಷ ಲಕ್ಷ್ಮಿ ಎಲ್ಲವೂ ನೆಲೆಸುತ್ತವೆ. ಆದ್ದರಿಂದ ಸಿರಿ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಸುಮಂಗಲಿಯರು, ಪುರುಷರು ಈ ವ್ರತವನ್ನು ಆಚರಿಸುತ್ತಾರೆ.
ವ್ರತಾಚರಣೆ ಹೇಗೆ?
ಲಕ್ಷ್ಮೀ ಎಂದರೆ ಶುದ್ಧತೆಯ ಸಂಕೇತ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.