ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಶನಿವಾರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ರಾಷ್ಟ್ರದ ಅಭಿವೃದ್ಧಿ ಮತ್ತು ರೈತರ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿದರು. ತಮ್ಮ ಪತ್ನಿ ಸುದೇಶ್ ಧನ್ಕರ್ ಅವರೊಂದಿಗೆ ಗೌಡರೊಂದಿಗೆ ಒಂದು ಗಂಟೆ ಕಾಲ ಕಳೆದ ಉಪರಾಷ್ಟ್ರಪತಿ, ಗೌಡರ ಪತ್ನಿ ಚೆನ್ನಮ್ಮ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ”ಉಪ ರಾಷ್ಟ್ರಪತಿ ಹಾಗೂ ಮಾಜಿ ಪ್ರಧಾನಿ ಪರಸ್ಪರ ಗೌರವ ಮತ್ತು ಸೌಹಾರ್ದದ ಆಧಾರದ ಮೇಲೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಾಜಿ ಪ್ರಧಾನಿಯ ಬಗ್ಗೆ ಉಪ ರಾಷ್ಟ್ರಪತಿಗಳು ಅಪಾರ ಗೌರವ ಹೊಂದಿದ್ದಾರೆ. ನಾನು ಅನೇಕ ಬಾರಿ ನೋಡಿದ್ದೇನೆ ಎಂದು ತಿಳಿಸಿದರು.
ಉಭಯ ನಾಯಕರು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದು, ಅವರ ಹೆಚ್ಚಿನ ಮಾತುಕತೆಯು ರೈತರಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು ಎಂದು ಹೇಳಿದರು.
ಈ ಹಿಂದೆ ಬೆಂಗಳೂರು ಪ್ರವಾಸದಲ್ಲಿ ದೇವೇಗೌಡರನ್ನು ಭೇಟಿಯಾಗಲು ಉಪರಾಷ್ಟ್ರಪತಿ ಬಯಸಿದ್ದರು. ಇಂದು ಅದನ್ನು ಈಡೇರಿಸಿದ್ದಾರೆ. ನಮ್ಮ ತಾಯಿ ಇನ್ನೂ ಆಸ್ಪತ್ರೆಯಲ್ಲಿದ್ದು, ಅವರ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅವರು ತೋರಿದ ಪ್ರೀತಿ ಮತ್ತು ಗೌರವಕ್ಕಾಗಿ ನಾವು ನಿಜವಾಗಿಯೂ ಅವರಿಗೆ ಋಣಿಯಾಗಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕುಮಾರಸ್ವಾಮಿ ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಎದುರಿಸಲಿ: ಡಿ.ಕೆ. ಸುರೇಶ್