ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳ, ತನ್ನನ್ನು ಹಿಡಿಯಲು ಬಂದರೆ ಕೈಗೆ ಸಿಗಬಾರದೆಂದು ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ತಪ್ಪಿಸಿಕೊಳ್ಳುವ ತಂತ್ರ ಹೂಡಿದ್ದ. ಇಂತಹ ಚಾಲಾಕಿ ಕಳ್ಳನನ್ನು ಸ್ಥಳೀಯರು ಕಡೆಗೂ ಹಿಡಿದು, ಪೊಲೀಸರಿಗೊಪ್ಪಿಸಿದ ಘಟನೆ ವಿಜಯಪುರದಲ್ಲಿ ಭಾನುವಾರ ನಡೆದಿದೆ. ವಿಜಯಪುರ ನಗರದ ಶಿಕಾರಿಖಾನೆಯಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿ ಪರಾರಿಯಾಗುವ ಹೊತ್ತಿನಲ್ಲಿ ಸ್ಥಳೀಯರು ಆತನನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಆತನನ್ನು ಹಿಡಿಯಲು ಬಂದವರೆದುರೇ ಆತ ಸಂಪೂರ್ಣ ಬಟ್ಟೆ ಬಿಚ್ಚಿಸೆದು ಪರಾರಿಯಾಗಲು ಯತ್ನಿಸಿದ. ಜನರು ತನ್ನನ್ನು ಹಿಡಿಯಲು ಬಂದರೆ ಸಿಗದೆ ನುಣುಚಿಕೊಳ್ಳಲು ತನ್ನ ಮೈ-ಕೈಗೆ ಎಣ್ಣೆ ಹಚ್ಚಿಕೊಂಡಿದ್ದ. ಆದರೆ, ಛಲ ಬಿಡದ ಸ್ಥಳೀಯರು ಕಡೆಗೂ ಬೆಂಬಿಡದೆ ಆತನನ್ನು ಹಿಡಿದು, ಹಗ್ಗದಿಂದ ಕಟ್ಟಿ ಥಳಿಸಿದರು. ಬಳಿಕ, ನಗರದ ಎಪಿಎಂಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.