- ಪೆಟ್ರೋಲ್ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ
- ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ
ವಿಜಯಪುರ: ಪೆಟ್ರೋಲ್ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ನಾವು ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇವೆ. ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಒಂಭತ್ತು ಸ್ಥಾನಗಳನ್ನು ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದನ್ನು ಈ ಬಾರಿ 19 ಕ್ಕೆ ಇಳಿದಿದ್ದಾರೆ. ನಮಗೆ 13% ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ ಎಂದು ಪ್ರಶ್ನಿಸಿದರು. ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ ಎಂದರು.
ಇನ್ನು ಇದೇ ವೇಳೆ ಪೆಟ್ರೋಲ್ ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 2021 ರಲ್ಲಿ ಪೆಟ್ರೋಲ್ ಮೇಲೆ 35% ತೆರಿಗೆ ಹಾಗೂ ಡೀಸೆಲ್ ಮೇಲೆ 24% ತೆರಿಗೆ ಹಾಕುತ್ತಿದ್ದರು. ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ 35 ರಿಂದ 25.92 ಕ್ಕೆ ನಂತರ ಇಳಿಸಿದರು. ಡೀಸಲ್ ಮೇಲೆ 14.34ಕ್ಕೆ ಇಳಿಸಿದರು. ಶೇ.7 ರೂಪಾಯಿಯಷ್ಟು ಕಡಿಮೆ ಮಾಡಿದರು. ಏಕೆಂದರೆ ಕೇರಳ ಆಗಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಕಡಿಮೆ ಮಾಡಲಿಲ್ಲ.
ಈಗ ಕರ್ನಾಟಕದಲ್ಲಿ 99.85 ರೂ ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ ಮೂರು ರೂಪಾಯಿ ಹೆಚ್ಚು ಮಾಡಿದ್ದೇವೆ. 102 ರೂ ಗೆ ಹೆಚ್ಚಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ 106.66 ರೂ.ಗಳಿದೆ. ಆಂಧ್ರದ ಅನಂತಪುರದಲ್ಲಿ 109.44 , ತೆಲಂಗಾಣದ ಹೈದರಾಬಾದ್ ನಲ್ಲಿ 107.40 ಹಾಗೂ ಮಹಾರಾಷ್ಟ್ರದಲ್ಲಿ 104.46 ರೂ.ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ ಕಡಿಮೆ ಇದೆ ಎಂದರು.