ವಿಜಯಪುರದ ಕೊಲ್ಹಾರ ಪಟ್ಟಣದ ಸಮೀಪ ಕೃಷ್ಣಾ ನದಿಯ ಬಲೂಟಿ ಜಾಕ್ವೆಲ್ನಲ್ಲಿ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಹೋದ 6 ಮಂದಿ ನೀರುಪಾಲಾಗಿರುವ ಧಾರುಣ ಘಟನೆ ನಡೆದಿದೆ.
ಕೃಷ್ಣಾ ನದಿಯ ದಡದಲ್ಲಿ ಇಸ್ಪೀಟ್ ಆಡುತ್ತಿದ್ದ ಕೆಲವರು ತಮ್ಮನ್ನು ಬಂಧಿಸಲು ಪೊಲೀಸರು ಬರುತ್ತಿದ್ದಾರೆ ಎಂಬ ವಿಷಯ ತಿಳಿದು ತಪ್ಪಿಸಿಕೊಳ್ಳುವ ಆತುರದಲ್ಲಿ, ಮೀನುಗಾರರು ನದಿಯ ದಡದಲ್ಲಿ ಇಟ್ಟುಕೊಂಡಿದ್ದ ತೆಪ್ಪ ಬಳಸಿಕೊಂಡು ನಡುಗಡ್ಡೆ ಪ್ರವೇಶಿಸಲು ಯತ್ನಿಸಿದ್ದಾರೆ.
ಆದರೆ, ಇದ್ದಕ್ಕಿದ್ದಂತೆ, ಬಲವಾದ ಗಾಳಿಗೆ ತೆಪ್ಪ ಅಲುಗಾಡಿ ನದಿಯಲ್ಲಿ ಮುಳುಗಿದೆ. ತೆಪ್ಪದಲ್ಲಿದ್ದ 8 ಜನರಲ್ಲಿ ಇಬ್ಬರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಆರು ಮಂದಿ ನೀರಿನಲ್ಲಿ ಮುಳುಗಿದ್ದಾರೆ. ಈವರೆಗೆ ಇಬ್ಬರ ದೇಹ ಮಾತ್ರ ಪತ್ತೆಯಾಗಿದೆ. ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಉಳಿದ ಶವಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.