ಕಳೆದ ವರ್ಷ ಬಾಯ್ಲರ್ ಸ್ಪೋಟಗೊಂಡು ಕಾರ್ಮಿಕನ ಜೀವ ಪಡೆದ ದುರಂತ ಘಟನೆ ಮಾಸುವ ಮುನ್ನವೇ ವಿಜಯಪುರ ಜಿಲ್ಲೆಯ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಪೋಟಗೊಂಡಿದೆ. ಸುದೈವವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ನಸುಕಿನಲ್ಲಿ ಬಾಯ್ಲರ್ ಸ್ಪೋಟಗೊಂಡಿದೆ. ಸ್ಪೋಟ ಸಂಭವಿಸುವ ಕೆಲವೇ ಸಮಯಕ್ಕೆ ಮುನ್ನ ಕರ್ತವ್ಯದಲ್ಲಿದ್ದ ಸುಮಾರು 15 ಕಾರ್ಮಿಕರು ಟೀ ಕುಡಿಯಲೆಂದು ಹೊರ ಹೋಗಿದ್ದರು. ಪರಿಣಾಮ ಘಟನೆಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ.
2023 ಮಾರ್ಚ್ 4 ರಂದು ಇದೇ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಕಾರ್ಮಿಕರು ಗಂಭಿರವಾಗಿ ಗಾಯಗೊಂಡಿದ್ದರು. ಈ ದುರ್ಘಟನೆ ಮಾಸುವ ಮುನ್ನವೇ ಬಾಯ್ಲರ್ ಸ್ಪೋಟಗೊಂಡಿರುವುದು ಕಾರ್ಮಿಕರು ಹಾಗೂ ರೈತರನ್ನು ಆತಂಕಕ್ಕೆ ದೂಡಿದೆ. ಕೆಲವೇ ತಿಂಗಳಲ್ಲಿ ಮುಂದಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕಾಗಿ ಯಂತ್ರೋಪಕರಣ ಪೂರ್ವ ಸಿದ್ಧತೆ ಕಾರ್ಯ ನಡೆದಿವೆ. ಮೇಲಿಂದ ಮೇಲೆ ಬಾಯ್ಲರ್ ಸ್ಪೋಟಗೊಳ್ಳಲು ಕಳಪೆ ಗುಣಮಟ್ಟದ ಕಾಮಗಾರಿ ಪ್ರಮುಖ ಕಾರಣವೆಂದು ರೈತರು ದೂರುತ್ತಿದ್ದಾರೆ