ಲಖನೌ: ಯಾವ್ಯಾವುದೋ ಕಾರಣಕ್ಕೆ ಮದುವೆಯ ದಿನ ಮುರಿದು ಬಿದ್ದಿರುವುದು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಹಮೀದ್ಪುರ ಎಂಬ ಹಳ್ಳಿಯಲ್ಲಿ ಬಿಸಿ ಬಿಸಿ ರೋಟಿ ಬಡಿಸಲು ತಡ ಮಾಡಿದ್ದಕ್ಕೆ ಕೋಪಗೊಂಡ ವರ ಮದುವೆಯನ್ನೇ ಮುರಿದುಕೊಂಡಿದ್ದಾನೆ.
ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಹಮೀದಪುರ ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಊಟ ಬಡಿಸಲು ತಡವಾದ ಕಾರಣಕ್ಕೆ ವರನೊಬ್ಬ ತನ್ನ ಮದುವೆ ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ದಾನೆ ಎಂದು ವರದಿಯಾಗಿದೆ. ಅಸಮಾಧನಗೊಂಡ ವರನು ತನ್ನ ಸಂಬಂಧಿಕರ ಜೊತೆ ಅಸಮಾಧಾನಗೊಂಡು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಮದುವೆಯ ಉಡುಪಿನಲ್ಲಿ ಕಾಯುತ್ತಿದ್ದ ವಧು ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ.
ರೊಟ್ಟಿ ಬಡಿಸುವಲ್ಲಿ ವಿಳಂಬ ವಿವಾದಕ್ಕೆ ಕಾರಣ
ವರದಿಗಳ ಪ್ರಕಾರ, ವಧುವಿನ ವಿವಾಹವನ್ನು ಮೆಹ್ತಾಬ್ ಎಂಬ ಯುವಕನೊಂದಿಗೆ ಏಳು ತಿಂಗಳ ಹಿಂದೆ ಏರ್ಪಡಿಸಲಾಗಿತ್ತು. ಡಿಸೆಂಬರ್ 22 ರಂದು, ಮದುವೆಯ ಸಂಭ್ರಮವು ಬಹಳ ಉತ್ಸಾಹದಿಂದ ಪ್ರಾರಂಭವಾಯಿತು. ವಧುವಿನ ಕುಟುಂಬವು ಮದುವೆ ದಿಬ್ಬಣವನ್ನು ಸಂಭ್ರಮದಿಂದ ಸ್ವಾಗತಿಸಿತು ಮತ್ತು ನಂತರ ಅವರಿಗೆ ಊಟೋಪಚಾರ ನಡೆಯಿತು. ಆದರೆ, ವರನ ಕಡೆಯ ಒಬ್ಬರು ರೊಟ್ಟಿಯನ್ನು ತಡವಾಗಿ ಬಡಿಸಲಾಯಿತುಎಂದು ಆರೋಪಿಸಿ ವಿವಾದಕ್ಕೆ ಕಾರಣರಾದರು.
ರಾತ್ರಿಯೇ ಮತ್ತೊಬ್ಬಳ ಜತೆಗೆ ಮದುವೆ
ವರನ ಕಡೆಯವರನ್ನು ವಧುವಿನ ಬಂಧುಗಳು ಸಮಾಧಾನಪಡಿಸುವ ವ್ಯರ್ಥ ಪ್ರಯತ್ನಗಳನ್ನು ನಡೆಸಿದರು. ಮದುವೆ ದಿಬ್ಬಣದವರು ವಧುವಿನ ಕುಟುಂಬದ ಜೊತೆ ಜಗಳವಾಡಿದರು. ವರನು ರಾತ್ರಿಯಲ್ಲಿ ಅಲ್ಲಿಂದ ಕಣ್ಮರೆಯಾಗಿದ್ದಾನೆ ಮತ್ತು ಸ್ವಲ್ಪ ಸಮಯದ ನಂತರ ಸಂಬಂಧಿಯನ್ನು ಮದುವೆಯಾಗಿದ್ದಾನೆ ಎಂದು ವರದಿಯಾಗಿದೆ. ಇವೆಲ್ಲ ಬೆಳವಣಿಗೆಗಳಿಂದ ರೊಚ್ಚಿಗೆದ್ದ ವಧು, ವರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅದನ್ನು ಆಧರಿಸಿ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಆರಂಭದಲ್ಲಿ ಇಂಡಸ್ಟ್ರಿಯಲ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಅವರ ದೂರಿಗೆ ಪೊಲೀಸರು ಕಿವಿಗೊಟ್ಟಿರಲಿಲ್ಲ. ಹೀಗಾಗಿ ನ್ಯಾಯಕ್ಕೆ ಕೋರಿ ಅವರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ. ವರನ ಕಡೆಯ ಐವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಮುರಿದುಬಿದ್ದ ಮದುವೆಯಿಂದಾಗಿ ವಧುವಿನ ಕುಟುಂಬಕ್ಕೆ 7 ಲಕ್ಷ ರೂ. ನಷ್ಟ ಉಂಟಾಯಿತು. ವರನಿಗೆ 1.5 ಲಕ್ಷ ರೂ. ವರದಕ್ಷಿಣೆಯಾಗಿ ಖರ್ಚಿಗೆ ನೀಡಲಾಗಿತ್ತು. ವರನ ಕಡೆಯ ಐದು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮದುಮಗಳೇ ಎಸ್ಪಿಗೆ ಮನವಿ ಮಾಡಿದರು. ವಧುವಿನ ಸಹೋದರ ರಾಜು ಅವರು ತಮಗೆ ಎಸ್ಪಿ ಕ್ರಮದ ಭರವಸೆ ನೀಡಿದ್ದಾರೆ. ಹಾಗೂ ಪೊಲೀಸರಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. . ಸ್ಥಳೀಯ ಪೊಲೀಸರ ನಿಷ್ಕ್ರಿಯತೆಯನ್ನು ಅವರು ಟೀಕಿಸಿದ್ದಾರೆ.