ಮದುವೆಗೆ ಮಧುಮಕ್ಕಳು ತಮ್ಮ ಕೈ ಮೇಲೆ ದಂಪತಿಗಳ ಚಿತ್ರ, ತಮ್ಮ ಸಂಗಾತಿಗಳ ಹೆಸರುಗಳು , ಇನಿಷಿಯಲ್ಗಳು ಮುಂತಾದ ಸಡಗರದ ದೃಶ್ಯಗಳನ್ನು ಬಿಡಿಸಿಕೊಂಡು ಸಂಭ್ರಮ ಪಡುವುದನ್ನು ನಾವು ಕಂಡಿದ್ದೇವೆ. ಇಲ್ಲಿ ಒಬ್ಬ ಮಹಿಳೆ ತಮ್ಮ ಎರಡೂ ಕೈಗಳ ಮೇಲೆ ತನ್ನ ವಿಚ್ಛೇಧನದ ನೋವಿನ ಕಥೆಯ ದೃಶ್ಯಗಳನ್ನು ಬಿಡಿ ಬಿಡಿಯಾಗಿ ಬಿಡಿಸಿಕೊಂಡಿದ್ದಾಳೆ. ಈ ದೃಶ್ಯಗಳು ಆಕೆಯ ತನ್ನ ವಿಫಲ ಮದುವೆಯ ವಿಚ್ಛೇಧನದ ಪೂರ್ಣ ಕಥೆಯನ್ನ ವಿವರಿಸುವಂತಿದೆ.
ಊರ್ವಶಿ ವೋರಾ ಶರ್ಮಾ ಎಂಬುವ ಖ್ಯಾತ ಮೆಹೆಂದಿ ಕಲಾವಿದೆ ಹಂಚಿಕೊಂಡಿರುವ ”ವಿಚ್ಛೇಧನ ಮೆಹೆಂದಿ” ಎಂಬ ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಇದು ಒಂದು ರೀತಿಯ ಹೊಸ ಪ್ರವೃತ್ತಿಯ ಗೋರಂಟಿಯಾಗಿದ್ದು, ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮ ಎರಡೂ ಕೈಗಳ ತುಂಬಾ ತನ್ನ ದಾಂಪತ್ಯದ ಭಾವನಾತ್ಮಕ ಆಘಾತ, ಒಂಟಿತನ ಹಾಗೂ ದ್ರೋಹ ಎಲ್ಲವನ್ನ ಕೆತ್ತಿಸಿಕೊಂಡಿದ್ದಾರೆ.
ಅವಳ ಅತ್ತೆಯು ಅನ್ಯಾಯವಾಗಿ ನಡೆಸಿಕೊಳ್ಳುವುದರಿಂದ ಹಿಡಿದು ಅವಳ ಪತಿಯಿಂದ ಬೆಂಬಲದ ಕೊರತೆಯನ್ನು ಅನುಭವಿಸುವವರೆಗೆ, ಅವಳು ಅನುಭವಿಸಿದ ನೋವು ಮತ್ತು ಸಂಕಟವನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ. ವಾದಗಳು, ತಪ್ಪು ತಿಳುವಳಿಕೆಗಳು ಆಳವಾದ ಒಂಟಿತನ ಮತ್ತು ವಿಮೋಚನೆಯ ಚಿತ್ರಗಳು, ಚಿಹ್ನೆಗಳು, ಪದಗಳ ಮೂಲಕ ಸಂಕೇತಿಸಲಾಗಿದೆ. ಆಕೆ ತೆಗೆದುಕೊಂಡ ನಿರ್ಧಾರವಾದ “ಅಂತಿಮವಾಗಿ ವಿಚ್ಛೇದನ” ಎಂಬ ಕಠೋರ ಸತ್ಯದ ಮೂಲಕ ಮೆಹೆಂದಿ ಕೊನೆಗೊಂಡಿದೆ. ಇದು ವಿಶಿಷ್ಟವಾದ ವಿವಾಹ-ಗೋರಂಟಿಗಳ ಲಕ್ಷಣಗಳಿಗಿಂತ ಭಿನ್ನವಾಗಿದ್ದು, ಎಲ್ಲರ ಗಮನ ಸೆಳೆದಿದೆ.