ಎಲೆಕ್ಟ್ರಾನಿಕ್ ಚಿಪ್ ಅಳವಡಿಕೆಯ ರಣಹದ್ದು ಕಾಣಿಸಿಕೊಂಡ ಹಿನ್ನೆಲೆ ಕಾರವಾರ ನಗರದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಸಂಶೋಧನೆ ಉದ್ದೇಶಕ್ಕಾಗಿ ಹದ್ದಿನ ಬೆನ್ನಿಗೆ ಚಿಪ್ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ ನಂತರ ಗೂಢಚಾರಿಕೆ ಸಂಶಯ ದೂರವಾಗಿದೆ. ನಗರದ ನದಿವಾಡಾದಲ್ಲಿ ಭಾನುವಾರ ರಣಹದ್ದು ಕಾಣಿಸಿಕೊಂಡಿದ್ದು, ಬೆನ್ನಿನ ಮೇಲೆ ಸೋಲಾರ್ಎಲ್ ಇಡಿ ಲೈಟ್ ಮಾದರಿ ಎಲೆಕ್ಟ್ರಾನಿಕ್ ಚಿಪ್ ಇತ್ತು. ಅಲ್ಲದೆ, ಹದ್ದಿನ 2 ಕಾಲುಗಳಿಗೆ ಹಸಿರು, ನೀಲಿ ಬಣ್ಣದ ಪಟ್ಟಿಯಿದ್ದು, ಅದರ ಮೇಲೆ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಬರೆಯಲಾಗಿದೆ. ಕಾರವಾರದಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾ ನೆಲೆಯಂತಹ ಸೂಕ್ಷ್ಮ ಪ್ರದೇಶಗಳಿದ್ದು, ಗೂಢಾಚಾರಿಕೆ ಆತಂಕವೂ ಎದುರಾಗಿತ್ತು. ಆದರೆ, ಆ ಪಕ್ಷಿ ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ಸಂಶೋಧನೆಗೆ ಒಳಪಟ್ಟಿರುವುದು ಎಂದು ಸ್ಥಳೀಯ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.