ಮೋದಿ 3.0 ಸರ್ಕಾರ ತರುತ್ತಿರುವ ಮೊದಲ ಮಹತ್ವದ ಮಸೂದೆ ಎಂದು ವಿಶ್ಲೇಷಿಸಲಾಗಿರುವ ಮುಸ್ಲಿಮರಿಗೆ ಸಂಬಂಧಿಸಿದ ʻವಕ್ಫ್ (ತಿದ್ದುಪಡಿ) ಮಸೂದೆʼ ಯನ್ನು ಗುರುವಾರ ಲೋಕಸಭೆ ಯಲ್ಲಿ ಮಂಡಿಸಲಾಗಿದೆ. ಆದರೆ ವಿರೋಧ ಪಕ್ಷಗಳು, ʻಮಸೂದೆಯಲ್ಲಿನ ಅಂಶಗಳು ಮುಸ್ಲಿಂ ವಿರೋಧಿʼ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ ಕಾರಣ, ಸದ್ಯಕ್ಕೆ ಅದನ್ನು ಅಂಗೀಕರಿಸದೇ ಜಂಟಿ ಸಂಸದೀಯ ಸಮಿತಿಗೆ ಕಳಿಸಲು ಸರ್ಕಾರ ತೀರ್ಮಾನಿಸಿದೆ.
ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ ಪ್ರಮುಖ ಅಂಶಗಳು:
- ಈಗಿನ ವಕ್ಫ್ ಕಾಯ್ದೆಯ ʻಸೆಕ್ಷನ್-40ʼ, ವಕ್ಫ್ ಮಂಡಳಿಗೆ ಯಾವುದೇ ಜಮೀನನ್ನು ವಶಪಡಿಸಿಕೊಂಡು ಅದನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಅಧಿಕಾರ ನೀಡುತ್ತದೆ. ಆದರೆ ಈ ಸೆಕ್ಷನ್-40 ಅನ್ನು ಹೊಸ ಮಸೂದೆಯಲ್ಲಿ ಕೈಬಿಡಲಾಗಿದೆ. ವಕ್ಫ್ ಮಂಡಳಿಯು ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಜಿಲ್ಲಾಧಿಕಾರಿಗಳ ಪರಿಶೀಲನೆ ಹಾಗೂ ಅವರ ಒಪ್ಪಿಗೆ ಕಡ್ಡಾಯವಾಗಲಿದೆ. ಬಳಿಕ ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಲಿದ್ದಾರೆ. ಈ ಮೂಲಕ ವಕ್ಫ್ ಮಂಡಳಿಯನ್ನು ದುರ್ಬಳಕೆ ಮಾಡಿಕೊಂಡು ಪರೋಕ್ಷವಾಗಿ ಜಮೀನು ಕಬ್ಜಾ ಮಾಡಿಕೊಳ್ಳುವ ಪರಿಪಾಠ ಅಂತ್ಯವಾಗಲಿದೆ.
- ಕೇಂದ್ರೀಯ ವಕ್ಫ್ ಕೌನ್ಸಿಲ್, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು, ಮುಸ್ಲಿಮೇತರರಿಗೆ ಮೊದಲ ಬಾರಿ ಪ್ರಾತಿನಿಧ್ಯ ನೀಡಲಾಗುತ್ತದೆ.
- ಬೋಹರಾ ಮತ್ತು ಅಘಖಾನಿಗಳಿಗೆ ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸಲು ಮಸೂದೆಯು ಪ್ರಸ್ತಾಪಿಸುತ್ತದೆ. ಮುಸ್ಲಿಂ ಸಮುದಾಯಗಳಲ್ಲಿನ ಪ್ರತ್ಯೇಕ ಪಂಥಗಳಾದ ಶಿಯಾಗಳು, ಸುನ್ನಿಗಳು, ಬೋಹ್ರಾಗಳು, ಅಗಾಖಾನಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ವಕ್ಫ್ ಮಂಡಳಿಯಲ್ಲಿ ಪ್ರಾತಿನಿಧ್ಯ ಲಭಿಸಲಿದೆ.
- ಕನಿಷ್ಠ 5 ವರ್ಷ ಕಾಲ ಇಸ್ಲಾಂ ಧರ್ಮವನ್ನು ಆಚರಿಸುವ ಮತ್ತು ಅಂತಹ ಆಸ್ತಿಯ ಮಾಲೀಕತ್ವವನ್ನು ಹೊಂದಿರುವ ವ್ಯಕ್ತಿಯನ್ನು ʻವಕ್ಫ್ʼ (ವಾಕಿ ಫ್- ದಾನಿ) ಎಂದು ಘೋಷಿಸಲಾಗುತ್ತದೆ.
ತಿದ್ದುಪಡಿ ಏಕೆ?
- ವಕ್ಸ್ ಮಂಡಳಿಯ ಅನಿಯಂತ್ರಿತ ಅಧಿಕಾರಗಳು ಮತ್ತು ದುರುಪಯೋಗಗಳು ಜನರ ಆತಂಕಕ್ಕೆ ಕಾರಣವಾಗಿದ್ದವು. ಉದಾಹರಣೆಗೆ 2022ರ ಸೆಪ್ಟೆಂಬರ್ನಲ್ಲಿ ತಮಿಳುನಾಡು ವಕ್ಫ್ ಬೋರ್ಡ್, ತಿರುಚೆಂದೂರೈ ಎಂಬ ಹಿಂದೂ ಪ್ರಧಾನ ಗ್ರಾಮದ ಮೇಲೆ ತನ್ನ ಸಂಪೂರ್ಣ ಹಕ್ಕು ಸಾಧಿಸಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.