ಜಲಸಂಪನ್ಮೂಲ ಇಲಾಖೆಯ ʻಸಿʼ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಸಂಬಂಧ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ್ದ ಆರೋಪದಡಿ 37 ಅನರ್ಹ ಅಭ್ಯರ್ಥಿಗಳು, ಮೂವರು ಸರ್ಕಾರಿ ನೌಕರರು, 11 ಮಂದಿ ಮಧ್ಯವರ್ತಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಕಲುಬುರಗಿ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ್, ಜೋಗ್ ಫಾಲ್ಸ್ ಕೆಪಿಟಿಸಿಎಲ್ ಕಚೇರಿಯ ಎಫ್ಡಿಎ ಕೃಷ್ಣ ಗುರುನಾಥ್ ರಾಥೋಡ್, ಜಲಸಂಪನ್ಮೂಲ ಇಲಾಖೆ ಎಸ್ಡಿಎ ಗಂಗೂರು ಪ್ರದೀಪ್ ಬಂಧಿತರು.
ಜತೆಗೆ ಹಾಸನದ ಟಿ.ರವಿ, ಮಳವಳ್ಳಿಯ ಪ್ರದೀಪ್, ಜೇವರ್ಗಿಯ ಎನ್.ನಿಂಗಪ್ಪ, ವಿಜಯಪುರದ ಸಿಂದಗಿ ನಿವಾಸಿ ಮಲ್ಲಿಕಾರ್ಜುನ್ ಸಂಪೂರ್, ಕಲುಬುರಗಿಯ ಮುಸ್ತಫಾ ಮತ್ತು 37 ಅನರ್ಹ ಅಭ್ಯರ್ಥಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 40 ಲಕ್ಷ ರುಪಾಯಿ ಮೌಲ್ಯದ 2 ಕಾರು, 17 ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯಿಂದ 2022ರ ಅಕ್ಟೋಬರ್ನಲ್ಲಿ 182 ʻಸಿʼ ವೃಂದದ ಎಸ್ಡಿಎ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಸಂಬಂಧ ನೇರ ನೇಮಕಾತಿಗೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಯಾವುದೇ ಲಿಖಿತ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿಯಲ್ಲಿ ಪಡೆದ ಅತಿ ಹೆಚ್ಚು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಆನ್ಲೈನ್ಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರಿ ನೌಕರರ ತೋರಿಸಿ ವಂಚನೆ
62 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ: ನೇಮಕಾತಿ ವಿಭಾಗದ ಅಧಿಕಾರಿಗಳು ಅರ್ಜಿ ಹಾಗೂ ಅಂಕಪಟ್ಟಿಗಳ ಪರಿಶೀಲನೆ ವೇಳೆ ರಾಜ್ಯದ 12 ಜಿಲ್ಲೆಗಳ 62 ಅಭ್ಯರ್ಥಿಗಳ ಅಂಕಪಟ್ಟಿಗಳು ನಕಲಿಯಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ಅಧಿಕಾರಿಗಳು 2023ರ ಜುಲೈನಲ್ಲಿ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿತ್ತು. ಇದೀಗ ತನಿಖೆ ನಡೆಸಿ ಅನರ್ಹ ಅಭ್ಯರ್ಥಿಗಳು, ಮಧ್ಯವರ್ತಿಗಳು ಸೇರಿದಂತೆ 48 ಮಂದಿಯನ್ನು ಬಂಧಿಸಲಾಗಿದೆ. ಈ ವಂಚನೆ ಜಾಲದಲ್ಲಿ ಇನ್ನೂ 25 ಮಂದಿ ಅನರ್ಹ ಅಭ್ಯರ್ಥಿಗಳು ಹಾಗೂ 6 ಮಂದಿ ಮಧ್ಯವರ್ತಿಗಳು ತಲೆಮರೆಸಿ ಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.