ವಯನಾಡ್ನಲ್ಲಿ ಭೂಕುಸಿತದ ಸಾಧ್ಯತೆ ಕುರಿತು ನೀಡಿದ್ದ ಎಚ್ಚರಿಕೆಯನ್ನು ಕೇರಳ ಸರ್ಕಾರ ಕಡೆಗಣಿಸಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದೆ. ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಅಮಿತ್ ಶಾ ನೀಡಿರುವ ಹೇಳಿಕೆಯನ್ನು ವಿಸ್ಕೃತವಾಗಿ ಪರಿಶೀಲಿಸಲಾಗಿದೆ. ಅವರು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯಸಭೆಯ ಹಾದಿ ತಪ್ಪಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಮತ್ತು ಹಿರಿಯ ಸಂಸದ ದಿಗ್ವಿಜಯ ಸಿಂಗ್ ಸಹಿ ಮಾಡಿರುವ ಪತ್ರದಲ್ಲಿ, ಸಚಿವರು ಅಥವಾ ಸಂಸದರು ಸದನದ ದಿಕ್ಕು ತಪ್ಪಿಸುವುದು ಹಕ್ಕುಚ್ಯುತಿ ಮತ್ತು ಸದನಕ್ಕೆ ಮಾಡುವ ಅವಮಾನವಾಗಿದೆ ಎಂದು ಹೇಳಲಾಗಿದೆ. ಕಳೆದ ಬುಧವಾರ ವಯನಾಡ್ ಭೂಕುಸಿತದ ಕುರಿತು ರಾಜ್ಯಸಭೆಯಲ್ಲಿ ಗಮನ ಸೆಳೆಯುವ ವೇಳೆ ಮಧ್ಯಪ್ರವೇಶಿಸಿದ ಅಮಿತ್ ಶಾ, ಜುಲೈ 23, 24, 25 ಮತ್ತು 26ರಂದು ಮಳೆ ಸಂಬಂಧ ಕೇಂದ್ರ ಸರ್ಕಾರ ನೀಡಿದ್ದ ಪೂರ್ವ ಎಚ್ಚರಿಕೆಗಳನ್ನು ಕೇರಳ ಸರ್ಕಾರ ಕಡೆಗಣಿಸಿತ್ತು ಎಂದಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಮಿತ್ ಶಾ ಅವರ ಆರೋಪಗಳನ್ನು ಅಲ್ಲಗಳೆದಿದ್ದು, 48 ಗಂಟೆಗಳಲ್ಲಿ 572 ಮಿಮೀ ದಾಖಲೆ ಮಳೆಯಾಗಿದೆ. ಆದರೆ, ನಮಗೆ ಎರಡು ದಿನಗಳಲ್ಲಿ 115 ಮಿಮೀ ನಿಂದ 204 ಮಿಮೀ ಮಳೆಯಾಗುವ ಎಚ್ಚರಿಕೆ ನೀಡಲಾಗಿತ್ತು. ಜುಲೈ 30 ಬೆಳಗಿನ ಜಾವದವರೆಗೆ ಭೂಕುಸಿತ ಸಂಭವಿಸಿದ ಪ್ರದೇಶಕ್ಕೆ ಐಎಂಡಿ ಆರೆಂಜ್ ಅಲರ್ಟ್ ನೀಡಿತ್ತು ಎಂದಿದ್ದಾರೆ. ದುರಂತ ಸಂಭವಿಸಿದ ನಂತರವೇ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯೂ ತಿಳಿಸಿದೆ.