ಇಂದು ಲೋಕಸಭೆ ಚುನಾವಣೆಗೆ ದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಹಿಂಸಾಚಾರ, ಕೊಲೆ, ಗಲಾಟೆಗಳು ಸಾಮಾನ್ಯವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಗಲಾಟೆ ನಡೆದಿದೆ. ಮುರ್ಷಿದಾಬಾದ್ನಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ಅವರು ಮತ ಚಲಾಯಿಸಲು ಹೋದಾಗ ಗಲಾಟೆ ನಡೆದಿದೆ.
ಧನಂಜಯ್ ಘೋಷ್ ಅವರು ಮತದಾನ ಮಾಡಲು ಹೋದಾಗ ಅವರನ್ನು ಬೂತ್ ಏಜೆಂಟ್ ಒಬ್ಬರು ತಡೆದಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ ನಾನೊಬ್ಬ ಬಿಜೆಪಿ ಅಭ್ಯರ್ಥಿ. ನನಗೆ ಚುನಾವಣೆ ಏಜೆಂಟ್ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್ ಘೋಷ್ ತಿಳಿಸಿದ್ದಾರೆ.