ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ ಕೇಜ್ರಿವಾಲ್, ಶೀಘ್ರದಲ್ಲೇ ಅಧಿಕೃತ ಸಿಎಂ ನಿವಾಸ ಖಾಲಿ ಮಾಡಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ. ʻಅರವಿಂದ ಕೇಜ್ರಿವಾಲ್ ಅವರು ಅಧಿಕೃತ ಸಿಎಂ ನಿವಾಸ ಆದಷ್ಟು ಬೇಗನೇ ಖಾಲಿ ಮಾಡಲಿದ್ದು, ಅವರು ಹೊಸ ಮನೆಯ ಹುಡುಕಾಟದಲ್ಲಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ನವದೆಹಲಿಯ ಸುತ್ತುಮುತ್ತಲಿನ ಸ್ಥಳಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದರಿಂದ ಅಲ್ಲಿನ ಜನರೊಂದಿಗೆ ಸದಾ ಸಂಪರ್ಕದಲ್ಲಿರಲು ನೆರವಾಗಲಿದೆ’ ಎಂದು ಪಕ್ಷವು ತಿಳಿಸಿದೆ.
ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ನಿವಾಸದಲ್ಲಿ ಕೇಜ್ರಿವಾಲ್ ಅವರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಈ ಮೊದಲು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಿಎಂ ನಿವಾಸ ಖಾಲಿ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದರು. ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಕೇಜ್ರಿವಾಲ್ ಅವರಿಗೆ ಕೇಂದ್ರ ಸರ್ಕಾರವು ವಸತಿ ಸೌಕರ್ಯವನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಎಎಪಿ ಮುಂದಿರಿಸಿತ್ತು. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಮೇರೆಗೆ ಬಿಡುಗಡೆಗೊಂಡಿದ್ದ ಕೇಜ್ರಿವಾಲ್, ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಬಳಿಕ ದೆಹಲಿಯ ನೂತನ ಸಿಎಂ ಆಗಿ ಆತಿಶಿ ಪ್ರಮಾಣವಚನ ಸ್ವೀಕರಿಸಿದ್ದರು.