ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ 2025-26 ಅನ್ನು ಶನಿವಾರ ಮಂಡಿಸಿದ್ದಾರೆ. ಈ ಬಾರಿ ಬಜೆಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿಯೇ ಇದೆ. ಹಾಗಾದ್ರೆ ದೇಶದ ಮೊತ್ತ ಮೊದಲ ಬಜೆಟ್ ಮಂಡಿಸಿದ್ದು ಯಾರು? ಯಾವತ್ತು? ಈ ಎಲ್ಲ ಪ್ರಶ್ನೆಗಳು ನಿಮಗೂ ಬಂದರ್ಬೇಕು ಅಲ್ವಾ? ಇಲ್ಲಿದೆ ನೋಡಿ ಈ ಕುರಿತು ವಿವರ.
ಭಾರತದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನವೇ ಬಜೆಟ್ ಮಂಡನೆ ಮಾಡಲಾಗಿತ್ತು. ಏಪ್ರಿಲ್ 7, 1860 ರಂದು ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಬ್ರಿಟಿಷ್ ಆಡಳಿತಕ್ಕಾಗಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದ್ದರು.
ಸ್ವತಂತ್ರ ಭಾರತದ ಮೊದಲ ಬಜೆಟ್ನ್ನು ನವೆಂಬರ್ 26, 1947 ರಂದು ಆಗಿನ ಹಣಕಾಸು ಸಚಿವ ಆರ್ ಕೆ ಷಣ್ಮುಖನ್ ಚೆಟ್ಟಿ ಮಂಡಿಸಿದ್ದರು. ಇದು ಭಾರತ ಸ್ವತಂತ್ರ್ಯ ಪಡೆದ ನಂತರ ಮಂಡನೆಯಾದ ಮೊದಲ ಬಜೆಟ್ ಎಂಬ ಅಭಿದಾನಕ್ಕೆ ಪ್ರಾಪ್ತವಾಗಿದೆ.
ಸ್ವಾತಂತ್ರ್ಯಾ ನಂತರದ ಭಾರತದ ಮೊದಲ ಬಜೆಟ್ನಲ್ಲಿ ಒಟ್ಟು ಆದಾಯ ₹171.15 ಕೋಟಿ ಮತ್ತು ವಿತ್ತೀಯ ಕೊರತೆ ₹24.59 ಕೋಟಿಯಾಗಿದ್ದವು. ಒಟ್ಟು ವೆಚ್ಚ ₹197.29 ಕೋಟಿ ಹಾಗೂ ರಕ್ಷಣಾ ವೆಚ್ಚ ₹92.74 ಕೋಟಿ ಎಂದು ಅಂದಾಜಿಸಲಾಗಿತ್ತು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದೇಶದಲ್ಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು 1962-69ರ ಅವಧಿಯಲ್ಲಿ ಹಣಕಾಸು ಸಚಿವರಾಗಿ 10 ಬಜೆಟ್ಗಳನ್ನು ಮಂಡಿಸಿದ್ದಾರೆ.
1955 ರವರೆಗೆ ಕೇಂದ್ರ ಬಜೆಟ್ ಅನ್ನು ಇಂಗ್ಲಿಷ್ನಲ್ಲಿ ಮಂಡಿಸಲಾಯಿತು. ನಂತರದ ಸರ್ಕಾರ ಬಜೆಟ್ನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮುದ್ರಿಸಲು ನಿರ್ಧರಿಸಿತು. ಭಾರತದಲ್ಲಿ ಮೊದಲ ಬಾರಿಗೆ ಕೋವಿಡ್-19 ಕಾರಣದಿಂದಾಗಿ 2021-22ರ ಕೇಂದ್ರ ಬಜೆಟ್ ಕಾಗದರಹಿತವಾಗಿತ್ತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025 ರ ಕೇಂದ್ರ ಬಜೆಟ್ನ್ನು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಯ ನಂತರ ಮಂಡಿಸಲು ಪ್ರಾರಂಭಿಸುತ್ತಾರೆ. ಇದು ಅವರ ಸತತ 8ನೇ ಬಜೆಟ್ ಆಗಿದೆ.
ಅಂದಹಾಗೆ, ದೇಶದಲ್ಲಿ ಬಜೆಟ್ ಮಂಡನೆಗೆ ಫೆಬ್ರವರಿ 1ರಂದೇ ಬೆಳಗ್ಗೆ 11ಗಂಟೆ ಎಂದು ನಿರ್ಧರಿಸಿದ್ದು ಯಾವಾಗ ಗೊತ್ತಾ? ಈ ಕ್ರಮ ಈ ಹಿಂದೆಯೂ ಇತ್ತೇ? ಅಥವಾ ಇತ್ತೀಚೆಗೆ ಮಾಡಲಾಯಿತೆ ಅನ್ನೋದರ ಬಗ್ಗೆ ಅನೇಕ ಮಂದಿಗೆ ಗೊಂದಲ ಇರಬಹುದು. ಈ ಕುರಿತು ಒಂದು ವಿವರಣೆ ಇಲ್ಲಿ ಕೊಡಲಾಗಿದೆ.
11 ಗಂಟೆಗೆ ಸಮಯ ನಿಗದಿಪಡಿಸಿದ್ಯಾರು? ಅಂದಹಾಗೆ, ಸ್ವಾತಂತ್ರ್ಯ ಬಂದ ನಂತರ ಫೆಬ್ರವರಿಯ ಕೊನೆಯ ಕೆಲಸದ ದಿನದಂದು (ಫೆಬ್ರವರಿ 28ರಂದು) ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ಸಮಯದ ವ್ಯತ್ಯಾಸದಿಂದಾಗಿ ಈ ಸಮಯವನ್ನು ಆಯ್ಕೆ ಮಾಡಲಾಗಿತ್ತು. ಭಾರತದ ಸಮಯವು ಬ್ರಿಟಿಷ್ ಬೇಸಿಗೆ ಸಮಯಕ್ಕಿಂತ 5.5 ಗಂಟೆಗಳಷ್ಟು ಮುಂದಿದೆ. ಹೀಗಾಗಿ ಸಂಜೆ 5 ಗಂಟೆಗೆ (IST) ಬಜೆಟ್ ಮಂಡನೆಯನ್ನು ಮಾಡುವುದೆಂದು ಬ್ರಿಟನ್ನಲ್ಲಿ ಹಗಲಿ ಹೊತ್ತಿನಲ್ಲಿ ಘೋಷಿಸಲಾಯಿತು.
ಆದರೆ, 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಈ ಪದ್ಧತಿಯನ್ನು ಬದಲಾಯಿಸಿದರು. 1998 ಮತ್ತು 2002 ರ ನಡುವೆ ಭಾರತದ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ದತ್ತಾಂಶವನ್ನು ಕೂಲಂಕುಶವಾಗಿ ವಿಶ್ಲೇಷಿಸಲು ಸಾಕಷ್ಟು ಸಮಯವಿರುವುದರಿಂದ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಬೇಕು ಎಂದು ಸಲಹೆ ನೀಡಿದರು. ಅದರಂತೆ ಬಜೆಟ್ ಮಂಡನೆಯ ಸಮಯವನ್ನು ಬದಲಾಯಿಸಿ ಬೆಳಗ್ಗೆ 11 ಗಂಟೆಗೆ ಮಂಡಿಸಲು ನಿರ್ಧಾರ ಮಾಡಲಾಯಿತು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc