ಕೊಪ್ಪಳ: ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ರಾಜ್ಯದ ಮಹಿಳೆಯರು ಸದ್ಬಳಕೆ ಮಾಡಿಕೊಂಡಿರುವ ಬಗ್ಗೆ ಹಲವು ಉದಾಹರಣೆಗಳಿವೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ಮೂವರು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿಗಳಾದ ಶಂಕರಮ್ಮ ನಾಯಕ ತನಗೆ ಬರುವ ಪ್ರತಿ ತಿಂಗಳ ಹಣವನ್ನು ತನ್ನ ಅನಾಥ ಮೊಮ್ಮಗಳ ಖಾತೆಗೆ ಜಮಾ ಮಾಡುತ್ತಿದ್ದಾರೆ.
ಇನ್ನು ಕೆ. ನರಸಮ್ಮ ಮಾಂಗಲ್ಯ ಸರ ಖರೀದಿ ಮಾಡಿಕೊಂಡಿದ್ದರೆ, ಭೂಸಮ್ಮ ರಾಘವೇಂದ್ರ ಕಿವಿಯೋಲೆ ಖರೀದಿಸಿದ್ದಾರೆ. ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ!. ಪ್ರತಿ ತಿಂಗಳು ಬರುವ ಹಣವನ್ನೇ ಕೂಡಿಟ್ಟುಕೊಂಡು ಈ ರೀತಿಯ ವಿಶೇಷ ಕಾರ್ಯಕ್ಕೆ ವೆಚ್ಚ ಮಾಡಿರುವುದು ಪ್ರಸಂಶೆಗೆ ಪಾತ್ರವಾಗಿದೆ. ಖುದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಇವರನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಆಹ್ವಾನ ನೀಡಿದ್ದಾರೆ. ನಮ್ಮೂರಿನಲ್ಲಿಯೇ ಮಹಿಳೆಯರು ಗ್ಯಾರಂಟಿಯ ಗೃಹಲಕ್ಷ್ಮಿ ಹಣವನ್ನು ಸದ್ಬಳಕೆ ಮಾಡಿಕೊಂಡಿರುವುದು ಸಂತೋಷವಾಗುತ್ತದೆ ಎಂದು ಕೊಪ್ಪಳದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ರೆಡ್ಡಿ ಶ್ರೀನಿವಾಸ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಗಂಡನಿಗೆ ಸ್ಕೂಟರ್ ಕೊಡಿಸಿದ ಮಹಿಳೆ!
ಪುತ್ತೂರು: ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ತಮ್ಮ ಗಂಡನಿಗೆ ಸ್ಕೂಟರ್ ಕೊಡಿಸಿರುವ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೋಡಿಂಬಾಡಿಯಲ್ಲಿ ನಡೆದಿದೆ.
ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಕ್ರಿಯಾ ಎನ್ನುವ ಮಹಿಳೆ ಹೋಂಡಾ ಡಿಯೋ 125 ಎಂಬ ಸ್ಕೂಟರ್ ಖರೀದಿಸಿದ್ದು, ಪೇಂಟರ್ ಕೆಲಸ ಮಾಡುವ ತಮ್ಮ ಗಂಡ ಸಲೀಂ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಸುಮಾರು 83 ಸಾವಿರಕ್ಕಿಂತ ಅಧಿಕ ಬೆಲೆ ಬಾಳುವ ಹೋಂಡಾ ಡಿಯೋ 125 ಖರೀದಿಸುವ ಉದ್ದೇಶದಿಂದ ಮಿಶ್ರಿಯಾ ಅವರು ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುವ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟಿದ್ದರು. ಈ ಗೃಹಲಕ್ಷ್ಮಿ ಹಣದ ಜತೆಗೆ ತಮ್ಮ ಬಳಿ ಇದ್ದ ಹಣ ಸೇರಿಸಿ ಸ್ಕೂಟರ್ ಖರೀದಿಸಿದ್ದರು. ಸ್ಕೂಟರ್ ಮೇಲೆ ‘ಆರ್ಥಿಕ ನೆರವು ಗೃಹಲಕ್ಷ್ಮಿ’ ಎಂಬ ನಾಮಫಲಕ ಹಾಕಿದ್ದು ಇದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಲಕ್ಷ್ಮೀ ಹೆಬ್ಬಾಳರ್ ಹಾಗೂ ಶಾಸಕ ಅಶೋಕ್ ರೈ ಫೋಟೋ ಹಾಕಿದ್ದಾರೆ.