ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಶ್ಲಾಘಿಸಿದೆ.
“2024-25ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ ಶೇ.7ರ ದರದಲ್ಲಿ ಬೆಳೆಯಲಿದೆ. ಒಳ್ಳೆಯ ಮಳೆಯಾಗಿರುವುದರಿಂದ ಕೃಷಿ ಉತ್ಪಾದನೆಯೂ ಚೆನ್ನಾಗಿರಲಿದೆ. ದೇಶವು ಈಗಲೂ ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆ ಯಾಗಿದೆ” ಎಂದು ಐಎಂಎಫ್ನ ಏಷ್ಯಾ ಪೆಸಿಫಿಕ್ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಭಾರತ ಸುಧಾರಣೆ ಮಾಡಿಕೊಂಡರೆ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ಮೊದಲನೆಯದಾಗಿ, ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು. ಎರಡನೆಯದಾಗಿ, ವ್ಯಾಪಾರಕ್ಕೆ ಸಂಬಂಧಿಸಿದಂತೆ ಇರುವ ಕೆಲ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಮೂರನೆಯದಾಗಿ, ಮೂಲಸೌಕರ್ಯ ಹಾಗೂ ಡಿಜಿಟಲ್ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದೂ ಅವರು ತಿಳಿಸಿದ್ದಾರೆ.