ಯಾದಗಿರಿ : ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣರನ್ನು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರೇ ಯೋಜನೆ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಾದಗಿರಿ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ವೀಸಾ ಕೊಡುವುದು ಯಾರು? ಕೇಂದ್ರದ ಬಿಜೆಪಿಯವರೇ ತಾನೇ ಎಂದು ಪ್ರಶ್ನಿಸಿದರು. ಅಲ್ಲದೆ ಪ್ರಜ್ವಲ್ ಪ್ರಕರಣಕ್ಕೂ ಡಿಸಿಎಂ ಡಿಕೆ ಶಿವಕುಮಾರ್ಗೂ ಯಾವುದೇ ಸಂಬಂಧ ಇಲ್ಲ ಎಂದರು.
ಪ್ರಜ್ವಲ್ ರೇವಣ್ಣ ಜೊತೆ ಫೋಟೋ ಇದ್ದರೆ ಏನಾಗುತ್ತೆ? ಕುಮಾರಸ್ವಾಮಿ ಜೊತೆಗೂ ಡಿಕೆ ಶಿವಕುಮಾರ್ ಫೋಟೋ ಇದೆ. ನನ್ನ ಜೊತೆಗೆ ಹೆಚ್ಡಿ ರೇವಣ್ಣ ಇರುವ ಫೋಟೋ ಕೂಡ ಇದೆ. ಹಾಗಾದ್ರೆ ಅವರನ್ನು ರಕ್ಷಣೆ ಮಾಡುತ್ತೇನೆ ಎಂದು ಅರ್ಥವಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಪೆನ್ಡ್ರೈವ್ ಹಿಂದೆ ಡಿಕೆ ಶಿವಕುಮಾರ್ ಕೈವಾಡ ಇದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕಾರ್ತಿಕ್ ಎಂಬಾತ ಪ್ರಜ್ವಲ್ ರೇವಣ್ಣರ ಚಾಲಕ ಆಗಿದ್ದ. ಕಾರ್ತಿಕ್ ಬಿಜೆಪಿ ಮುಖಂಡನ ಕೈಯಲ್ಲಿ ಪೆನ್ಡ್ರೈವ್ ಕೊಟ್ಟಿದ್ದ. ಅದನ್ನು ಆತನೇ ಹೇಳಿಕೊಂಡಿದ್ದಾನೆ. ಹೆಚ್ಡಿಕೆ ಅವರು ಕೇವಲ ರಾಜಕಾರಣಕ್ಕಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ ಎಂದರು.