ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಕೇಂದ್ರದ ಎನ್ಡಿಎ ಸರ್ಕಾರವೂ ಪತನವಾಗಲಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಇದು ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಕಂಟಕ ಎದುರಾಗಲಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಹಾಗೂ ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪೂಜಾರಿ ಭವಿಷ್ಯವಾಣಿ ನುಡಿದಿದ್ದಾರೆ. ಈ ಹಿಂದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿತ್ತು.
ಅಮ್ಮ (ದೇವಿ) ಕನಸಿನಲ್ಲಿ ಬಂದು 9 ಜನ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಳು. ಕೊನೆಗೆ ಇಬ್ಬರಿಗೆ ಸಿಎಂ ಸ್ಥಾನ ನೀಡಲು ಪ್ರೇರಣೆ ನೀಡಿದಳು. ಆಗ ನಾನು ಡಿಕೆ ಶಿವಕುಮಾರ್ಗೆ ಹೂವಿನ ಹಾರ ಹಾಕು ಅಂದೆ. ಆದರೆ ಸಿದ್ದರಾಮಯ್ಯಗೆ ಹೂವಿನ ಹಾರ ಹಾಕಿದ್ದಳು. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗುವ ಕಾಲ ಬಂದಿದೆ ಎಂದು ಪೂಜಾರಿ ಹೇಳಿದ್ದಾರೆ.