ತಮಿಳುನಾಡಿನ ಫೆಂಗಲ್ ಚಂಡಮಾರುತದ ಬಿಸಿ ಬೆಂಗಳೂರಿಗೂ ತಟ್ಟಿದೆ. ಇಂದು ಬೆಳಗ್ಗೆಯಿಂದ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆ ಸುರಿಯುತ್ತಿದ್ದು, ಕಿಲೋ ಮೀಟರ್ ಗಟ್ಟಲೇ ಜಾಮ್ ಆಗಿದೆ. ಭಾರೀ ಟ್ರಾಫಿಕ್ ಜಾಮ್ಗೆ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.
ಕೆ.ಆರ್ ಮಾರ್ಕೆಟ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್, ಓಕಳಿಪುರಂ, ಮಾಗಡಿ ರೋಡ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಷ್ಟೇ ಅಲ್ಲ ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಮೈಸೂರು ರೋಡ್, ಜಯನಗರ, ಲಾಲ್ ಬಾಗ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಸುತ್ತಲೂ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.
ಸುಮಾರು 3 ಗಂಟೆಯಿಂದ ಜಾಮ್ ಉಂಟಾಗಿದ್ದು, ಕಿಲೋ ಮೀಟರ್ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿವೆ. ಭಾರೀ ಮಳೆ ನಡುವೆಯೂ ವಾಹನ ಸವಾರರು ಟ್ರಾಫಿಕ್ನಲ್ಲಿ ಸಿಲುಕಿದ್ದಾರೆ. ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನೂ ಮೂರು ದಿನ ಮಳೆ
ಕಳೆದ ಎರಡು ದಿನಗಳಿಂದ ಬೆಂಗಳೂರಲ್ಲಿ ಬಿಸಿಲೇ ಇಲ್ಲ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಕಾಟ ಎದುರಾಗಲಿದೆ. ರಾಜ್ಯದ ಕೆಲವು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ತಿಳಿದು ಬಂದಿದೆ.