ಮಹಿಳಾ ಟಿ20 ವಿಶ್ವಕಪ್ನ 7ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 3.30 ರಿಂದ ಶುರುವಾಗಲಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಭಾರತ ತಂಡವು ಮೊದಲ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ 58 ರನ್ಗಳ ಹೀನಾಯ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ -2.900 ನೆಟ್ ರನ್ ರೇಟ್ನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್ ರೇಸ್ನಲ್ಲಿ ಉಳಿಯಬಹುದು.
ಅತ್ತ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಸೋಲುಣಿಸಿರುವ ಪಾಕಿಸ್ತಾನ್ 2 ಅಂಕಗಳೊಂದಿಗೆ +1.550 ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೇಲೇರಬೇಕಾದ ಅನಿವಾರ್ಯತೆ ಇದೆ.
ಒಂದು ವೇಳೆ ಭಾರತ ತಂಡವು ಪಾಕಿಸ್ತಾನ್ ವಿರುದ್ಧ ಕೂಡ ಸೋತರೆ ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಏಕೆಂದರೆ ಟೀಮ್ ಇಂಡಿಯಾಗೆ ಇನ್ನುಳಿದಿರುವುದು ಕೇವಲ 2 ಮ್ಯಾಚ್ಗಳು ಮಾತ್ರ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೂ ಒಟ್ಟು 4 ಅಂಕಗಳನ್ನು ಮಾತ್ರ ಸಂಪಾದಿಸಬಹುದು. ಅತ್ತ ಎರಡು ತಂಡಗಳು 6 ಅಂಕಗಳನ್ನು ಕಲೆಹಾಕಿದರೆ ಟೀಮ್ ಇಂಡಿಯಾ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿಯೇ ಇಂದಿನ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕ.
ಇನ್ನು ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಜಯ ಸಾಧಿಸಿ ಉಳಿದೆರಡು ಪಂದ್ಯಗಳಲ್ಲೂ ಜಯಭೇರಿ ಬಾರಿಸಿದರೆ ಒಟ್ಟು 6 ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸಬಹುದು. ಹಾಗಾಗಿ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಅಮೋಘ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ರೇಸ್ನಲ್ಲಿ ಉಳಿಯಬಹುದು.
ಅಂದಹಾಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಈವರೆಗೆ 15 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಟೀಮ್ ಇಂಡಿಯಾ 12 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತ ತಂಡದ ಗೆಲುವನ್ನು ನಿರೀಕ್ಷಿಸಬಹುದು.