ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಟಿಆರ್ಪಿ ಪಡೆವ ಶೋ ಎಂದರೆ ಅದು ಬಿಗ್ಬಾಸ್ ಕನ್ನಡ ಶೋ. ಈ ರಿಯಾಲಿಟಿ ಶೋ ಪ್ರಾರಂಭ ಆಗಿ ಅಂತ್ಯವಾಗುವ ಮೂರು ತಿಂಗಳ ವರೆಗೆ ಬಹುತೇಕ ಟಿಆರ್ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ಆದರೆ ಇದೀಗ ಕೆಲವು ಬಿಗ್ಬಾಸ್ ಸ್ಪರ್ಧಿಗಳು ನಮ್ಮಿಂದಲೇ ಶೋಗೆ ಇಷ್ಟೋಂದು ಟಿಆರ್ಪಿ ಬರುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ಈ ಸೀಸನ್ನಲ್ಲಿ ಕೆಲ ಸ್ಪರ್ಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಸುದೀಪ್ ಟಿಆರ್ಪಿ ವಿಷಯವನ್ನು ವಿವರವಾಗಿ ವಿವರಿಸಿ ಭ್ರಮೆ ದೂರ ಮಾಡಿದ್ದಾರೆ. ಮತ್ತು ಸ್ಪರ್ಧಿಗಳಿಂದ ಟಿಆರ್ಪಿ ಅಲ್ಲ ಎಂದು ಹೇಳಿದ್ದಾರೆ.
ಕಳೆದ ವಾರ ಯಾರೂ ಎಲಿಮಿನೇಟ್ ಆಗಿರಲಿಲ್ಲ. ಆದರೆ ಭಾನುವಾರದ ಎಪಿಸೋಡ್ ಬಳಿಕ ಭವ್ಯಾ, ಇನ್ನೇನು ಎಲಿಮಿನೇಟ್ ಆಗುತ್ತಾರೆ ಎನ್ನುವಂತೆ ಬಾಗಿಲಿನವರೆಗೆ ಹೋಗಿ ವಾಪಸ್ಸಾದರು. ಭವ್ಯಾ ಎಲಿಮಿನೇಷನ್ ವರೆಗೆ ಹೋಗಿದ್ದು ಭವ್ಯಾ ಸೇರಿದಂತೆ ಮನೆಯವರಿಗೆ ಶಾಕ್ ಆಯ್ತು. ಆದರೆ ಭವ್ಯಾ ಸೇಫ್ ಆದ ಬಳಿಕ ಚೇಂಜಿಂಗ್ ರೂಂನಲ್ಲಿ ಮಾತನಾಡಿದ್ದ ಅನುಷಾ, ಭವ್ಯಾ, ಚೈತ್ರಾ ಅವರುಗಳು ಟಿಆರ್ಪಿ ವಿಷಯ ಮಾತನಾಡಿದ್ದರಂತೆ. ನಮ್ಮಿಂದ ಒಳ್ಳೆಯ ಟಿಆರ್ಪಿ ಸಿಗುತ್ತೆ ಹಾಗಾಗಿ ಬೇಗ ಹೊರಗೆ ಕಳಿಸಲ್ಲ ಎಂದು ಭವ್ಯಾ ಹೇಳಿದ್ದರಂತೆ. ಇದರ ಬಗ್ಗೆ ಸುದೀಪ್ ಶನಿವಾರದ ಶೋನಲ್ಲಿ ಮಾತನಾಡಿದರು.
‘ಸ್ಪರ್ಧಿಗಳು, ಸ್ಪರ್ಧಿಗಳಾಗಿ ಮಾತ್ರವೇ ಇರಿ. ನೀವ್ಯಾಕೆ ಶೋನ ನಿರ್ದೇಶಕ, ಮಾರ್ಕೆಟಿಂಗ್ ವ್ಯಕ್ತಿ ಆಗಲು ಹೋಗುತ್ತೀರಿ. ಈ ಚಾನೆಲ್ ವರ್ಷಪೂರ್ತಿ ಟಿಆರ್ಪಿಯಲ್ಲಿ ಟಾಪ್ನಲ್ಲಿರುತ್ತದೆ. ಹಲವಾರು ಶೋಗಳು, ಕಲಾವಿದರು ಇದಕ್ಕೆ ಕಾರಣ ಆಗಿದ್ದಾರೆ. ನಮ್ಮಿಂದಲೇ ಟಿಆರ್ಪಿ ಬರುತ್ತಿದೆ ಎಂಬುದನ್ನು ತಲೆಯಿಂದ ತೆಗೆದು ಹಾಕಿ. ಒಂದೊಮ್ಮೆ ಸ್ಪರ್ಧಿಗಳಿಂದ ಟಿಆರ್ಪಿ ಬರುವುದಿದ್ದರೆ 17 ಸ್ಪರ್ಧಿಗಳಿರುತ್ತಾರೆ, ಒಬ್ಬೊಬ್ಬರೇ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದಂತೆ ಟಿಆರ್ಪಿ ಸಹ ಇಳಿಯಬೇಕಿತ್ತು ಅಲ್ಲವೆ, ಸ್ಪರ್ಧಿಗಳಿಂದ ಟಿಆರ್ಪಿ ಇದ್ದರೆ ಆಯಾ ಸ್ಪರ್ಧಿ ಹೊರಗೆ ಹೋಗುತ್ತಿದ್ದಂತೆ ಟಿಆರ್ಪಿ ಸಹ ಇಳಿಯಬೇಕಿತ್ತಲ್ಲ, ಏಕೆ ಇಳಿಯುತ್ತಿಲ್ಲ? ಬದಲಿಗೆ ಜನ ಕಡಿಮೆ ಆದಷ್ಟು ಟಿಆರ್ಪಿ ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದಿದ್ದಾರೆ ಸುದೀಪ್.
ಮನೆಯಲ್ಲಿ ಸ್ಪರ್ಧಿಗಳು ಜಗಳ ಮಾಡುವುದು, ಸ್ಟ್ರಾಟಜಿ ಮಾಡುವುದು ಇದೆಲ್ಲ ಓಕೆ, ಆದರೆ ಮನೆಯವ ಮಾತಿನಿಂದ ಶೋನ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತಿದೆ ಎಂದಾಗ ನಾನು ನೇರವಾಗಿ ಮಾತನಾಡುತ್ತೇನೆ ಎಂದಿದ್ದಾರೆ ಸುದೀಪ್, ಕಳೆದ ವಾರ ಎಲಿಮಿನೇಷನ್ ರೌಂಡ್ ಇರಲಿಲ್ಲ ಎಂಬ ಬಗ್ಗೆ ಮಾತನಾಡುತ್ತಾ, ಕಳೆದ ವಾರ ಎಲಿಮಿನೇಷನ್ ರೌಂಡ್ ಇರಲಿಲ್ಲ ಎಂಬುದು ನಿಮಗೆ ಗೊತ್ತಿರಲಿಲ್ಲ. ಆದರೆ ಜನರಿಗೆ ಅದು ಮೊದಲೇ ಗೊತ್ತಿತ್ತು. ನಾವು ಮುಚ್ಚು ಮರೆ ಮಾಡಿರಲಿಲ್ಲ. ಏಕೆಂದರೆ ಕಳೆದ ವಾರ ವೋಟಿಂಗ್ ಲೈನ್ ಓಪನ್ ಆಗಿರಲೇ ಇಲ್ಲ. ಮತ ಹಾಕದೆ ಯಾರೂ ಎಲಿಮಿನೇಟ್ ಆಗುವುದಿಲ್ಲ. ಜನರಿಗೆ ಅದು ಮೊದಲೇ ಗೊತ್ತಿತ್ತು. ಟಿಆರ್ಪಿಗಾಗಿ ಮಾಡಿದ್ದಲ್ಲ, ಅಥವಾ ಟಿಆರ್ಪಿಗಾಗಿ ಯಾರನ್ನೋ ಉಳಿಸಿಕೊಳ್ಳುವ ಪ್ಲಾನ್ ಸಹ ಅದಲ್ಲ’ ಎಂದಿದ್ದಾರೆ ಸುದೀಪ್.