ಸೈಬರ್ ವಂಚಕರು ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ನಗರದ ಸಾಫ್ಟ್ವೇರ್ ಎಂಜಿನಿಯರೊಬ್ಬರಿಗೆ ಕರೆ ಮಾಡಿ ಹೊಸ ಮೊಬೈಲ್ ಗಿಫ್ಟ್ ಕಳುಹಿಸಿ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 2.80 ಕೋಟಿ ರು. ದೋಚಿದ್ದಾರೆ.
ವೈಟ್ಫೀಲ್ಡ್ ನಿವಾಸಿ ದೇಬಾಶಿಷ್ ರಾಯ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೋಹಿತ್ ಜೈನ್ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 0066 (2), 20318(4),319 (2) ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?
ದೇಬಾಶಿಷ್ ರಾಯ್ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ಕಳೆದ ನ.27ರಂದು ಮೋಹಿತ್ ಜೈನ್ ಹೆಸರಿನಲ್ಲಿ ದೇಬಾಶಿಷ್ಗೆ ವಾಟ್ಸಾಪ್ ಕರೆಮಾಡಿದ್ದು, ತಾನು ಸಿಟಿ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ.ಬಳಿಕ ನಿಮಗೆ ಫ್ರೀ ಕ್ರೆಡಿಟ್ ಕಾರ್ಡ್ ಅಪ್ಯೂವಲ್ ಆಗಿದೆ. ಹೀಗಾಗಿ ಏರ್ಟೆಲ್ ಶಾಪ್ಗೆ ತೆರಳಿ ನಿಮ್ಮ ಮೊಬೈಲ್ ಸಂಖ್ಯೆಗೆ ಹೊಸ ಸಿಮ್ ಕಾರ್ಡ್ ಖರೀದಿಸುವಂತೆ ಸೂಚಿಸಿದ್ದಾನೆ.
ಅಪರಿಚಿತನ ಸೂಚನೆಯಂತೆ ದೇಬಾಶಿಷ್, ಹೊಸ ಏರ್ಟೆಲ್ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಬಳಿಕ ಅಪರಿಚಿತರು ಡಿ.1ರಂದು ಸಿಟಿ ಯೂನಿಯನ್ ಬ್ಯಾಂಕ್ ಹೆಸರಿನಲ್ಲಿ ದೇಬಾಶಿಷ್ ವಿಳಾಸಕ್ಕೆಗಿಫ್ಟ್ ರೂಪದಲ್ಲಿ ರೆಡ್ಮೀ 13 ಸಿಮೊಬೈಲ್ ಕಳುಹಿಸಿದ್ದಾರೆ.
ಅಪರಿಚಿತರ ಸೂಚನೆ ಮೇರೆಗೆ ದೇಬಾಶಿಷ್ ಆಹೊಸ ಮೊಬೈಲ್ಗೆ ಹೊಸ ಸಿಮ್ ಕಾರ್ಡ್ ಹಾಕಿ ಆಕ್ಟಿವೇಟ್ ಮಾಡಿ ಕೆಲವು ಮಾಹಿತಿಗಳನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ, ಮೊಬೈಲ್ಗೆ ಯಾವುದೇ ಇ-ಮೇಲ್ ಅಥವಾ ಯಾವುದೇ ಸಂದೇಶಗಳು ಬಂದಿಲ್ಲ.
ಬ್ಯಾಂಕ್ಗೆ ಹೋದಾಗ ವಂಚನೆ ಬೆಳಕಿಗೆ:
ಈ ಬಗ್ಗೆ ಅನುಮಾನಗೊಂಡ ದೇ ಬಾಶಿಷ್ ಡಿ.5ರಂದುಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ತಮ್ಮ ಎರಡು ಖಾತೆಗಳಿಂದ ವಿವಿಧ ಹಂತಗಳಲ್ಲಿ ಒಟ್ಟು 2.80 ಕೋಟಿ ರು. ಕಡಿತವಾಗಿದೆ ಎಂದು ಬ್ಯಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ದೇಬಾಶಿಷ್ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಕ್ರೆಡಿಟ್ಕಾರ್ಡ್ ನೀಡುವುದಾಗಿ ನಂಬಿಸಿ ಕರೆಮಾಡಿದ್ದ ಅಪರಿಚಿತ ವ್ಯಕ್ತಿಗಳೇ ಖಾತೆಗಳಿಂದ ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ವೈಟ್ ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆಗೆ ಆರಂಭಿಸಿರುವ ಪೊಲೀಸರು, ವಂಚಕರು ದೇಬಾಶಿಗೆ ಕಳುಹಿಸಿದ್ದ ಮೊಬೈಲ್ವಶಕ್ಕೆ ಪಡೆದಿದ್ದಾರೆ.ದೇಬಾಶಿಷ್ ಬ್ಯಾಂಕ್ ಖಾತೆಗಳಿಂದ ಯಾವ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿ ಸೈಬರ್ ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ https://whatsapp.com/channel/0029VafyCqRFnSzHn1JWKi1B