ಹತ್ತು ದಿನಗಳ ನಾಡಹಬ್ಬ ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ವಿಜಯ ದಶಮಿ ದಿನವಾದ ಇಂದು ತೆರೆ ಬೀಳಲಿದ್ದು, ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ತುದಿಗಾಲಲ್ಲಿ ನಿಂತಿದ್ದಾರೆ, ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ನಡೆಯುತ್ತಿದ್ದು, ರಾಜ್ಯದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸಲಾಗುತ್ತಿದೆ. ಐತಿಹಾಸಿಕ ಜಂಬೂ ಸವಾರಿಗೆ ಅಂತಿಮ ಹಂತದ ಸಿದ್ದತಾ ಕಾರ್ಯಗಳು ನಡೆಯುತ್ತಿವೆ. 750 ಕೆಜಿ ತೂಕದ ಅಂಬಾರಿಯಲ್ಲಿ ವಿರಾಜಮಾನಾಳದ ಅಧಿದೇವತೆ ಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತ 58 ವರ್ಷದ ‘ಅಭಿಮನ್ಯು’ ನೇತೃತ್ವದ ಗಜಪಡೆ ಸಾಗಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ನಾಲ್ಕು ಹೆಣ್ಣಾನೆ ಸೇರಿದಂತೆ ಒಟ್ಟು 14 ಆನೆಗಳು ಭಾಗಿಯಾಗಿವೆ. ಈ ಪೈಕಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಗೋಪಿ, ವರಲಕ್ಷ್ಮೀ, ಪ್ರಶಾಂತ, ಲಕ್ಷ್ಮೀ, ಧನಂಜಯ, ಸುಗ್ರೀವ, ದೊಡ್ಡ ಹರವೆ ಲಕ್ಷ್ಮೀ, ಭೀಮ, ಕಂಜನ್, ಹಿರಣ್ಯಾ, ರೋಹಿತ, ಮಹೇಂದ್ರ ಹಾಗೂ ಹೊಸ ಆನೆ ಏಕಲವ್ಯ ದಸರಾಗೆ ಬಂದಿವೆ. ಅಂಬಾರಿ ಹೊರುವ ಅಭಿಮನ್ಯುವಿಗೆ 9 ಆನೆಗಳು ಮಾತ್ರ ಸಾಥ್ ನೀಡಲಿವೆ.ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಿರುವ 9 ಆನೆಗಳಿಗೆ ತೂಕ ಹಾಕುವ ಪ್ರಕ್ರಿಯೆ ನಡೆದಿದ್ದು, ಕ್ಯಾಪ್ಟನ್ ಅಭಿಮನ್ಯು ಅತಿ ಹೆಚ್ಚು ಭಾರ ಹೊಂದಿದ್ದಾನೆ. ಪ್ರತಿವರ್ಷ ಅರ್ಜುನ ಅತಿಹೆಚ್ಚು ಭಾರ ತೂಗುತ್ತಿದ್ದ. ಆದರೆ, ಅವನ ಕಣ್ಮರೆಯಿಂದಾಗಿ ಈ ಬಾರಿ ಕ್ಯಾಪ್ಟನ್ ಅಭಿಮನ್ಯು ಅತಿ ಹೆಚ್ಚು ಭಾರ ತೂಗಿದೆ.
ಕಳೆದ ಬಾರಿ 5,560 ಕೆಜಿ ತೂಕ ಹೊಂದಿದ್ದ ಅಭಿಮನ್ಯು ಈ ಬಾರಿ 5,820 ಕೆಜಿ ತೂಗಿದ. 3,495 ಕೆಜಿ ಇದ್ದ ವರಲಕ್ಷ್ಮಿ 3,555 ಕೆಜಿ ತೂಕ ಇದ್ದಾಳೆ. 4,945 ಕೆಜಿ ಇದ್ದ ಭೀಮ 5,380 ಕೆಜಿ, 4,730 ಕೆಜಿ ಇದ್ದ ಏಕಲವ್ಯ 5,095, 3,625 ಕೆಜಿ ತೂಕ ಇದ್ದ ರೋಹಿತ 3,930 ತೂಕ ಹೊಂದಿದ್ದಾನೆ. 4,970 ಕೆಜಿ ಇದ್ದ ಗೋಪಿ 5,280 ಕೆಜಿ, 5,155 ಕೆಜಿ ಇದ್ದ ಧನಂಜಯ 5,255 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಒಟ್ಟನಲ್ಲಿ ಎಲ್ಲಾ ಆನೆಗಳು ಆರಾಮಾಗಿದ್ದಾವೆ. ಜಂಬೂ ಸವಾರಿಯನ್ನಾ ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಗೆ ಇಂದು ನಡೆಯಲಿರುವ ಪ್ರಸಿದ್ಧ ದಸರಾ ಮೆರವಣಿಗೆ ಪಂಜಿನ ಕವಾಯತು ಪ್ರದರ್ಶನ ಜನರನ್ನು ಮತ್ತಷ್ಟು ಆಕರ್ಷಿಸಲಿವೆ. ಎಲ್ಲ ಕಡೆಗಳನ್ನು ಸಿಸಿ ಟಿವಿ ಮೂಲಕ ಭದ್ರತೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚುವರಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.