85 ವರ್ಷದ ವೃದ್ಧೆಯ ಮೇಲೆ 35 ವರ್ಷದ ಕಿಡಿಗೇಡಿಯೊಬ್ಬ ಬರ್ಬರವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯ ಮೃತಪಟ್ಟಿರುವ ಹೀನಕೃತ್ಯ ಉತ್ತರಪ್ರದೇಶದಲ್ಲಿ ನಡೆದಿದೆ. ಬರೇಲಿಯ ಹಫೀಜ್ಗಂಜ್ನಲ್ಲಿ ಸೋಮವಾರ 85 ವರ್ಷದ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾದ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆಯ ನೆರೆಮನೆಯಲ್ಲಿ ವಾಸಿಸುವ ರಾಕೇಶ್ ಎಂದು ಗುರುತಿಸಲಾದ 35 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ ಮತ್ತು ಮಗ ಮೃತಪಟ್ಟ ನಂತರ ಸಂತ್ರಸ್ತೆ ಒಂಟಿಯಾಗಿ ವಾಸವಾಗಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ. ಮಹಿಳೆಯ ಸಹೋದರ ಮತ್ತು ಅತ್ತಿಗೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಸೊಸೆ ಅವರೊಂದಿಗೆ ವಾಸಿಸುತ್ತಿದ್ದಾರೆ. ಸೊಸೆಯ ಪ್ರಕಾರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂತ್ರಸ್ತೆಯ ಮನೆಗೆ ಹೋದಾಗ, ರಾಕೇಶ್ ತನ್ನ ಅತ್ತೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು ಎಂದು ಆರ್ಯ ಹೇಳಿದರು.
ಬಳಿಕ ಆಕೆ ಆತನಿಗೆ ಎಚ್ಚರಿಕೆ ನೀಡಿದಾಗ ಆರೋಪಿ ಪರಾರಿಯಾಗಿದ್ದು, ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಈ ಭೀಕರ ಕೃತ್ಯದ ಬಳಿಕ ವೃದ್ಧೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮದ್ಯವ್ಯಸನಿಯಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಆರ್ಯ ತಿಳಿಸಿದ್ದಾರೆ. ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ.