ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ತಾರ ವಿಮಾನಕ್ಕೆ UK17 ವಿಮಾನ ಫ್ರಾಂಕ್ಫರ್ಟ್ ಏರ್ಪೋರ್ಟ್ನಲ್ಲಿ ಸುರಕ್ಷಿತವಾಗಿ ಇಳಿದಿದೆ. ತಪಾಸಣೆ ನಡೆಸಲಾಗುತ್ತಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ಪರಿಶೀಲನೆ ಬಳಿಕ ವಿಮಾನ ಗಮ್ಯ ಸ್ಥಾನಕ್ಕೆ ತೆರಳಲಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 18ರಂದು ಕೂಡ ವಿಸ್ತಾರ ವಿಮಾನಕ್ಕೆ ಬಾಂಬ್ ಕರೆ ಬಂದಿತ್ತು. ಕಳೆದ ಕೆಲ ದಿನಗಳಿಂದ ಭಾರತೀಯ ವಿಮಾನ ಸಂಸ್ಥೆಯ ಸುಮಾರು 40 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇದೆಲ್ಲವೂ ಹುಸಿ ಬಾಂಬ್ ಬೆದರಿಕೆ ಕರೆಗಳಾಗಿವೆ ಎಂದು ತಿಳಿದುಬಂದಿದೆ. ಇದಾದ ಬಳಿಕ ತಪಾಸಣೆ ನಡೆಸಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರದ ಹಿನ್ನೆಲೆಯಲ್ಲಿ ಎರಡು ಗಂಟೆಗಳ ಬಳಿಕ ಮತ್ತೆ ಲಂಡನ್ ಗೆ ಪ್ರಯಾಣ ಬೆಳೆಸಿತು ಎಂದು ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.