ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ ಸೌತ್ ಸಿನಿಮಾಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈ ನಡುವೆ ನಟಿ ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. ನನ್ನ ಸಿನಿಮಾಗಳು ಸೋಲಬೇಕೆಂದು ಅನೇಕರು ಕಾಯುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.
ಕೃತಿ ಶೆಟ್ಟಿ ಮಾತನಾಡಿ, ನಾನು ನಟಿಸಿದ ಮೊದಲ ಸಿನಿಮಾ ‘ಉಪ್ಪೇನ’ ಸೂಪರ್ ಹಿಟ್ ಆಯಿತು. ಆದರೆ ಕೆಲವರು ನಾನು ಸೋಲುತ್ತೇನೆ ಎಂದು ನಿರೀಕ್ಷಿಸಿದ್ದರು. ಮೊದಲ ಸಿನಿಮಾ ಫ್ಲಾಪ್ ಆಗಿದ್ದರೆ, ಒಂದು ವರ್ಗದ ಜನ ನನ್ನನ್ನು ತುಳಿಯಲು ಎದುರು ನೋಡುತ್ತಿದ್ದರು. ನಾನು ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ನನ್ನ ಮೊದಲ ಸಿನಿಮಾ ಯಶಸ್ವಿಯಾದಾಗ ಅದರ ಸಂಪೂರ್ಣ ಕ್ರೆಡಿಟ್ ಅನ್ನು ನಾನು ತೆಗೆದುಕೊಳ್ಳಲಿಲ್ಲ. ಅದೇ ರೀತಿ ಸಿನಿಮಾ ಫ್ಲಾಪ್ ಆದಾಗಲೂ ಅದರ ಕ್ರೆಡಿಟ್ ಅನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದು ಮಾತನಾಡಿದ್ದಾರೆ. ನನ್ನ ಕೆರಿಯರ್ನಲ್ಲಿ ಎಲ್ಲಿ ತಪ್ಪಾಯಿತು ಅನ್ನೋದನ್ನು ಅರಿತುಕೊಂಡಿದ್ದೇನೆ. ಗೆಲುವಿಗಿಂತ ಸೋಲಿನಿಂದಲೇ ಹೆಚ್ಚು ಪಾಠ ಕಲಿತಿದ್ದೇನೆ. ಸಿನಿಮಾ ಸೋಲು ಮತ್ತಷ್ಟು ನನ್ನನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ ಎಂದಿದ್ದಾರೆ. ನಟಿಯ ಸೋಲನ್ನು ನೋಡಲು ಯಾರು ಕಾಯ್ತಿದ್ದಾರೆ ಎಂಬುದನ್ನು ನಟಿ ಬಿಟ್ಟು ಕೊಟ್ಟಿಲ್ಲ. ಆದರೆ ಟೀಕೆ ಮಾಡುವವರಿಗೆ ಕೃತಿ ತಕ್ಕ ಉತ್ತರ ನೀಡಿದ್ದಾರೆ.