ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಬಿರುಗಾಳಿಯನ್ನೇ ಎಬ್ಬಿಸಿತ್ತು, ಇತ್ತೀಚೆಗೆ ಅದು ತುಸು ಕಡಿಮೆ ಆಗಿದೆಯಾದರೂ ಇನ್ನೂ ಪೂರ್ಣವಾಗಿ ಆರಿಲ್ಲ. ಹೇಮಾ ಕಮಿಟಿ ವರದಿ ಹೊರಬಿದ್ದಾಗ ಮಲಯಾಳಂನ ಹಲವು ನಟಿಯರು ಈ ಬಗ್ಗೆ ಮಾತನಾಡಿದ್ದರು, ಕೆಲ ದೊಡ್ಡ ನಟ, ನಟಿಯರು, ನಿರ್ಮಾಪಕರು ಈ ಬಗ್ಗೆ ಮಾತನಾಡಬೇಕು, ಆರೋಪಗಳಿಗೆ ಉತ್ತರ ನೀಡೇಕೆಂದು ಒತ್ತಾಯಿಸಿದ್ದರು. ಕೆಲವು ನಟಿಯರು ಸಿನಿಮಾ ರಂಗದ ಕೆಲವು ಗಣ್ಯರ ಮೇಲೆ ಬಹಿರಂಗ ಆರೋಪಗಳನ್ನು ಸಹ ಮಾಡಿದ್ದರು. ಆ ರೀತಿ ಹೇಮಾ ಕಮಿಟಿ ವರದಿ ಬಳಿಕ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಿದ್ದ ನಟಿಯೊಬ್ಬಾಕೆಯ ಮೇಲೆ ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿದೆ.
ಇದನ್ನು ಓದಿ: ಚಿಟಿಕೆ ಹೊಡೆದು ದರ್ಶನ್ಗೆ ಎಚ್ಚರಿಸಿದ ಜಗದೀಶ್!
ಹೇಮಾ ಕಮಿಟಿ ವರದಿ ಬಿಡುಗಡೆ ಆದ ಬಳಿಕ ಆ ಬಗ್ಗೆ ಮಾತನಾಡಿದ್ದ ನಟಿ ಸಂದ್ರಾ ಥಾಮಸ್, ಕೇರಳ ಫಿಲ್ಮ್ಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಹಾಗೂ ಇತರೆ ಕೆಲವು ಮಲಯಾಳಂ ಚಿತ್ರರಂಗದ ಸಂಘ-ಸಂಸ್ಥೆಗಳ ಬಗ್ಗೆ ಖಾರವಾಗಿ ಮಾತನಾಡಿದ್ದರು, ಈ ಸಂಘ ಸಂಸ್ಥೆಗಳು ಹೇಮಾ ಕಮಿಟಿ ವರದಿ ಕುರಿತಾಗಿ ಏಕೆ ಮೌನವಾಗಿವೆ, ಸಂಘದ ಸದಸ್ಯರ ಮೇಲೆ ಆರೋಪ ಬಂದಾಗಲೂ ಸಹ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದೇ ಕಾರಣಕ್ಕೆ ಈಗ ನಟಿಯ ಮೇಲೆ ಮಲಯಾಳಂ ನಿರ್ಮಾಪಕರ ಸಂಘ ನಿಷೇಧ ಹೇರಿದೆ.
ಅಕ್ಟೋಬರ್ 28ರಂದು ಸಭೆ ನಡೆಸಿದ್ದ ನಿರ್ಮಾಪಕರ ಸಂಘದ ಪದಾಧಿಕಾರಿಗಳು ನಟಿ ಸಂದ್ರಾ ಥಾಮಸ್ಗೆ ಷೋಕಾಸ್ ನೊಟೀಸ್ ನೀಡಿದ್ದರು. ಈಗ ನಿರ್ಮಾಪಕರ ಸಂಘದ ಕಾರ್ಯದರ್ಶಿ ರಾಜೇಶ್ ಎಂಬುವರು, ‘ಸಂಘದಿಂದ ಸಂದ್ರಾ ಥಾಮಸ್ ಅವರಿಗೆ ನಿಷೇಧ ಹೇರುತ್ತಿರುವುದಾಗಿ, ಮುಂದಿನ ದಿನಗಳಲ್ಲಿ ಅವರೊಂದಿಗೆ ಯಾವುದೇ ನಿರ್ಮಾಣ ಸಂಸ್ಥೆ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಸಂದ್ರಾ ಥಾಮಸ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಸಂಘ ನೀಡಿದ್ದ ಷೋಕಾಸ್ ನೊಟೀಸ್ಗೆ ಸೂಕ್ತ ಪ್ರತ್ಯುತ್ತರ ನೀಡಿದ ಬಳಿಕವೂ ಸಹ ನನ್ನನ್ನು ತೆಗೆದು ಹಾಕಿದ್ದಾರೆ. ನನ್ನ ಮೇಲೆ ನಿಷೇಧ ಹೇರುವ ಮೂಲಕ ಮಹಿಳೆಯ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ’ ಎಂದಿದ್ದಾರೆ ಸಂದ್ರಾ ಥಾಮಸ್.
ಇದನ್ನು ಓದಿ: ಚಿಟಿಕೆ ಹೊಡೆದು ದರ್ಶನ್ಗೆ ಎಚ್ಚರಿಸಿದ ಜಗದೀಶ್!
ಈ ಹಿಂದೆ ಸಂದ್ರಾ ಥಾಮಸ್, ನಿರ್ಮಾಪಕರ ಸಂಘದ ಒಂಬತ್ತು ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿನಿಮಾಕ್ಕೆ ಸಂಬಂಧಿಸಿದಂತೆ ಒಂದು ವಿವಾದವನ್ನು ಬಗೆಹರಿಸಿಕೊಳ್ಳಲು ಕರೆಯಲಾಗಿದ್ದ ಸಭೆಯಲ್ಲಿ ತಮ್ಮ ಮೇಲೆ ಹಲ್ಲೆ ನಿಂದನೆ ಮಾಡಲಾಗಿದೆ ಎಂದು ಸಂದ್ರಾ ಆರೋಪ ಮಾಡಿದ್ದರು. ಈಗ ನಿರ್ಮಾಪಕರ ಸಂಘವು, ‘ಸಂದ್ರಾ, ಸುಳ್ಳು ಹೇಳಿಕೆ, ಸುಳ್ಳು ದೂರುಗಳನ್ನು ದಾಖಲಿಸಿ, ಅಶಿಸ್ತಿನಿಂದ ವರ್ತಿಸಿರುವ ಕಾರಣ ಅವರ ಮೇಲೆ ನಿಷೇಧ ಹೇರಲಾಗಿದೆ’ ಎಂದಿದ್ದಾರೆ. ಸಂದ್ರಾ ಥಾಮಸ್ 1991 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ ಕೆಲ ಸಿನಿಮಾಗಳ ನಿರ್ಮಾಣವನ್ನೂ ಸಹ ಮಾಡಿದ್ದಾರೆ.