ಮಲಯಾಳಂನ ಬೆಂಗಳೂರು ಡೇಸ್, ಪ್ರೇಮಂ ಮೊದಲಾದ ಹಿಟ್ ಸಿನಿಮಾಗಳ ನಾಯಕ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಲಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಊನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಟ ನಿವಿನ್ ಪೌಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪ ನಿರಾಧಾರ. ನಕಲಿ ದೂರು ನೀಡಿ ಎಫ್ಐಆರ್ ದಾಖಲಿಸಿದ್ದಾರೆ. ನನ್ನ ವಿರುದ್ಧ ದೂರು ನೀಡಿರುವ ಮಹಿಳೆಯ ಪರಿಚಯವೂ ನನಗಿಲ್ಲ, ಆಕೆಯೊಂದಿಗೆ ಮಾತನ್ನೂ ಆಡಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಯಾವ ಹಂತಕ್ಕೆ ಹೋಗುವುದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ನನ್ನ ವಿರುದ್ಧ ದೂರು ದಾಖಲಿಸಿರುವ ಮಹಿಳೆಯ ಪರಿಚಯೂ ನನಗಿಲ್ಲ. ಆಕೆಯೊಂದಿಗೆ ನಾನು ಮಾತನಾಡಿಲ್ಲ. ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರು ನನ್ನ ವಿರುದ್ಧ ಇದೇ ರೀತಿ ದೂರು ನೀಡಿದ್ದರು. ಆಗ ಪೊಲೀಸ್ ಅಧಿಕಾರಿಯಿಂದ ಕರೆ ಬಂದಿತು. ಸರ್ಕಲ್ ಇನ್ಸ್ಪೆಕ್ಟರ್ವೊಬ್ಬರು ನನಗೆ ಫೋನ್ ಮೂಲಕವೇ ದೂರಿನ ಪ್ರತಿಯನ್ನು ಓದಿ ಹೇಳಿದರು. ಆಕೆ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳಿದೆ. ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದೆ. ಹಾಗಾಗಿ ಅದು ನಕಲಿ ದೂರು ಅಂತ ಪೊಲೀಸರಿಗೆ ಗೊತ್ತಾಗಿತ್ತು. ನಾನು ಪ್ರತಿದೂರು ನೀಡಬೇಕೆ ಎಂದು ಕೇಳಿದಾಗ, ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ ಅಂತಲೇ ಅವರು ಹೇಳಿದ್ದರು. ಇದೀಗ ಮತ್ತೆ ನನ್ನ ವಿರುದ್ಧ ಸಂಚು ನಡೆದಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಸತ್ಯ ಹೊರ ಬರುವುದಕ್ಕೆ ಸ್ವಲ್ಪ ಸಮಯವಾಗುತ್ತದೆ. ಆದರೂ ನಾನು ಕಾಯುತ್ತೇನೆ ಎಂದು ಅಂತ ಹೇಳಿದ್ದಾರೆ.