ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಸಾವು ಬಹಳಷ್ಟು ತಲ್ಲಣಗಳನ್ನು ಹುಟ್ಟುಹಾಕಿದೆ. ಧೂಮಪಾನಿಗಳಿಗೆ ಮತ್ತು ತಂಬಾಕು ಚಟವಿರುವವರಿಗೆ ಮಾತ್ರವೇ ಶ್ವಾಸಕೋಶದ ಕ್ಯಾನ್ಸರ್ ಬರುವಂಥದ್ದು, ಜೀವನಶೈಲಿ ಚೆನ್ನಾಗಿದ್ದರೆ ಇಂಥವೆಲ್ಲ ಹತ್ತಿರ ಸುಳಿಯುವುದಿಲ್ಲ ಎಂಬ ವಿಶ್ವಾಸದ ಮೇಲೆ ಅಪರ್ಣಾ ಅವರ ನಿರ್ಗಮನ ದೊಡ್ಡ ಬರೆ ಹಾಕಿದೆ.
ದೇಶದೆಲ್ಲೆಡೆ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿರುವುದು ಅತ್ಯಂತ ಆತಂಕದ ಸಂಗತಿ. ಇತ್ತೀಚಿನ ಕೆಲವು ಅಧ್ಯಯನಗಳು ಇನ್ನೂ ವಿಚಿತ್ರ ಸಂಗತಿಗಳನ್ನು ಹೊರಗೆಡವುತ್ತಿವೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ಗೆ ಸಾವನ್ನಪ್ಪುತ್ತಿರುವವರಲ್ಲಿ ಬಹುಪಾಲು ಜನ ಸಿಗರೇಟ್ ಸೇದುವವರೇ ಅಲ್ಲ, ತಂಬಾಕಿನ ಯಾವ ಚಟವೂ ಇಲ್ಲದವರು!
ಜಗತ್ತಿನ ಉಳಿದೆಲ್ಲ ಕಡೆಗಳಿಗಿಂತ 10 ವರ್ಷ ಮುಂಚಿತವಾಗಿ ಪುಪ್ಪುಸದ ಕ್ಯಾನ್ಸರ್ ಭಾರತದಲ್ಲಿ ದಾಳಿ ಮಾಡುತ್ತಿದೆ. ಅಂದರೆ, ಪಶ್ಚಿಮ ದೇಶಗಳಲ್ಲಿ 55 ವರ್ಷಗಳ ನಂತರ ಈ ರೋಗ ಕಂಡುಬಂದರೆ, ನಮ್ಮಲ್ಲಿ ಇನ್ನೂ 10 ವರ್ಷ ಮೊದಲು. ಇಂಥ ಎಲ್ಲ ನತದೃಷ್ಟರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಮುಗಿಲು ಮುಟ್ಟಿರುವ ವಾಯು ಮಾಲಿನ್ಯ. ವಿಶ್ವ ವಾಯು ಗುಣಮಟ್ಟದ ವರದಿಯನ್ನು ಆಧರಿಸಿ ಹೇಳುವುದಾದರೆ, ವಿಶ್ವದ ೪೦ ಭಯಂಕರ ಮಲಿನ ನಗರಗಳಲ್ಲಿ 37 ನಗರಗಳು ಇರುವುದು ದಕ್ಷಿಣ ಏಷ್ಯಾದಲ್ಲಿ. ಈ ಪೈಕಿ ನಾಲ್ಕು ಅತ್ಯಂತ ಮಲಿನ ನಗರಗಳು ಭಾರತದಲ್ಲೇ ಇವೆ. ಹಾಗಾಗಿ ಬೀಡಿ, ಸಿಗರೇಟು ಸೇದದಿದ್ದರೂ ಇತರರು ಸ್ಮೋಕಿಂಗ್ ಮಾಡಿದ ಹೊಗೆ ನಮಗರಿವಿಲ್ಲದೆ ನಮ್ಮ ಉಸಿರಿನೊಳಗೆ ಬಂದರೂ ಅಥವಾ ಸಂಚಾರ ದಟ್ಟಣೆಯಲ್ಲಿ ಮಾಲಿನ್ಯಕಾರಕ ಹೊಗೆ ಸೇವಿಸಿದರೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.
ಚೀನಾ, ಭಾರತ, ಇಂಡೋನೇಷ್ಯಾ, ಫಿಲಿಪ್ಪೀನ್ಸ್ ಮತ್ತು ಥಾಯ್ಲೆಂಡ್ ದೇಶಗಳು 2020ರಲ್ಲಿ ಅತಿ ಪ್ರಮಾಣದ ಶ್ವಾಸಕೋಶದ ಕ್ಯಾನ್ಸರ್ ದಾಖಲಿಸಿವೆ. ಸಾರ್ವಜನಿಕ ಆರೋಗ್ಯ ಕ್ಷೇತ್ರ ಈಗಾಗಲೇ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದು, ಇವೆಲ್ಲವುಗಳ ಜೊತೆಗೆ ವಾಯು ಮಾಲಿನ್ಯದಿಂದ ಆಗುತ್ತಿರುವ ಸಮಸ್ಯೆಗಳು ಆರೋಗ್ಯವನ್ನು ಪಾತಾಳಕ್ಕೆ ದೂಡುತ್ತಿವೆ. ಭಾರತದಲ್ಲಿ, 1990ರಲ್ಲಿ ಪುಪ್ಪುಸ ಕ್ಯಾನ್ಸರ್ನ ಪ್ರಮಾಣ 6.2 %ರಷ್ಟಿತ್ತು. 2019ರಲ್ಲಿ ಈ ಪ್ರಮಾಣ 7.7%ಕ್ಕೇರಿದೆ. 2025ರ ವೇಳೆಗೆ ನಗರ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚುವ ಆತಂಕವಿದೆ. ಆನುವಂಶಿ ಕಾರಣಗಳು ಸಹ ಇದಕ್ಕೆ ದೊಡ್ಡ ಮಟ್ಟದಲ್ಲಿ ಕೊಡಗೆಯನ್ನು ನೀಡುತ್ತಿವೆ.