ಅಪ್ರಾಪ್ತ ವಿದ್ಯಾರ್ಥಿಗಳು ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬಳಿಕ ಹತ್ಯೆಗೈದಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.ಮೃತ ಬಾಲಕಿ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸೀನಿಯರ್ಗಳಾದ ಆರನೇ ತರಗತಿಯಲ್ಲಿ ಓದುತ್ತಿರುವ 12 ಮತ್ತು 13 ವರ್ಷ ವಯಸ್ಸಿನ ಇಬ್ಬರು ಬಾಲಕರು ಅತ್ಯಾಚಾರವೆಸಗಿ, ಬಳಿಕ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಬಾಲಕಿಯ ಮೃತದೇಹವನ್ನು ಕಾಲುವೆಯೊಂದಕ್ಕೆ ಎಸೆದಿದ್ದಾರೆ.
ಬಾಲಕಿ ಭಾನುವಾರದಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯ ಪತ್ತೆ ಕಾರ್ಯಕ್ಕೆ ಪೊಲೀಸರು ಶ್ವಾನಗಳನ್ನು ಬಳಸಿದ್ದರು. ಶ್ವಾನವು ಮೂವರು ಬಾಲಕರ ಮನೆ ಮುಂದೆ ಹೋಗಿ ನಿಂತಿತ್ತು. ಪೊಲೀಸರು ಬಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ವಿಚಾರವನ್ನು ಅವರು ಬಾಯ್ಬಿಟ್ಟಿದ್ದಾರೆ. ಬಾಲಕಿಯ ಶವ ಇನ್ನೂ ಪತ್ತೆಯಾಗದ ಕಾರಣ ನಾಪತ್ತೆ ಪ್ರಕರಣವಾಗಿ ಪರಿಗಣಿಸಿದ್ದೇವೆ ಎಂದು ಮುಚ್ಚುಮರ್ರಿ ಪೊಲೀಸರು ಹೇಳಿದ್ದಾರೆ.