ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿರುವ ಅರ್ಶ್ದೀಪ್, ಬೂಮ್ರಾ, ಭುವನೇಶ್ವರ್ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಅರ್ಶ್ದೀಪ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು ಕೇವಲ 2 ವರ್ಷಗಳಾಗಿವೆ. ಈ ಅವಧಿಯಲ್ಲಿ ಅರ್ಶ್ದೀಪ್ ನೋಡನೋಡುತ್ತಲೇ ದಿಗ್ಗಜ ಆಟಗಾರರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ಈ ಎರಡು ವರ್ಷಗಳಲ್ಲಿ 92 ವಿಕೆಟ್ ಉರುಳಿಸುವ ಮೂಲಕ, ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಅವರೀಗ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ ನಂ.2 ಸ್ಥಾನಕ್ಕೇರಿದ್ಧಾರೆ. ವೇಗದ ಬೌಲರ್ಗಳಲ್ಲಿ ಭಾರತದ ಪರ ಇವರೇ ಈಗ ನಂ.1.
2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಅರ್ಷದೀಪ್ ಸಿಂಗ್ ಈವರೆಗೆ 59 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1222 ಎಸೆತಗಳನ್ನು ಎಸೆದಿರುವ ಅವರು ಒಟ್ಟು 92 ವಿಕೆಟ್ ಕಬಳಿಸಿದ್ದಾರೆ.
ವೇಗದ ಬೌಲರುಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಭುವನೇಶ್ವರ್ . ಟೀಮ್ ಇಂಡಿಯಾ ಪರ 87 ಟಿ20 ಪಂದ್ಯಗಳನ್ನಾಡಿ, 1791 ಎಸೆತಗಳಲ್ಲಿ ಒಟ್ಟು 90 ವಿಕೆಟ್ ಕಬಳಿಸಿದ್ದರು. ಅವರೀಗ ಬಹುತೇಕ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ.
ಇದನ್ನು ಓದಿ:ಮೂರನೇ ಟಿ-20 ಪಂದ್ಯವನ್ನು ಗೆದ್ದು ಬೀಗಿದ ಭಾರತ ತಂಡ
ಇನ್ನು ವಿಶ್ವ ಶ್ರೇಷ್ಟ ಬೌಲರ್ ಜಸ್ಪ್ರೀತ್ ಬೂಮ್ರಾ ಟೀಮ್ ಇಂಡಿಯಾ ಪರ ಈವರೆಗೆ 70 ಟಿ20 ಪಂದ್ಯಗಳನ್ನಾಡಿ 1509 ಎಸೆತಗಳನ್ನು ಎಸೆದಿದ್ದಾರೆ. ಒಟ್ಟು 89 ವಿಕೆಟ್ ಕಬಳಿಸಿದ್ದಾರೆ. ಇದೀಗ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿರುವ ಅರ್ಷದೀಪ್ ಸಿಂಗ್, 92 ವಿಕೆಟ್ಗಳೊಂದಿಗೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗಿ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ 37 ರನ್ ನೀಡಿ 3 ವಿಕೆಟ್ ಪಡೆದು, ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದೇ ಪಂದ್ಯದಲ್ಲಿ ಬೂಮ್ರಾ ಮತ್ತು ಭುವನೇಶ್ವರ್ ದಾಖಲೆಯನ್ನು ಹಿಂದಿಕ್ಕಿದರು.ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ 79 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಚಹಲ್ ಒಟ್ಟು 96 ವಿಕೆಟ್ ಕಬಳಿಸಿದ್ದಾರೆ. ಇದೀಗ ಚಹಲ್ ಅವರನ್ನು ಹಿಂದಿಕ್ಕಲು ಅರ್ಷದೀಪ್ ಸಿಂಗ್ಗೆ ಕೇವಲ 5 ವಿಕೆಟ್ಗಳ ಅವಶ್ಯಕತೆಯಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಯುವ ಎಡಗೈ ವೇಗಿಯಿಂದ ಭರ್ಜರಿ ದಾಖಲೆ ನಿರೀಕ್ಷಿಸಬಹುದು.