ಹಿಂದೂ ಕ್ಯಾಲೆಂಡರ್ನ ನಾಲ್ಕನೇ ತಿಂಗಳಾದ ಆಷಾಢ ಮಾಸವು 2024 ರ ಜುಲೈ 6 ರ ಶನಿವಾರದಿಂದ ಪ್ರಾರಂಭವಾಗಿದೆ. ಆಷಾಢ ಮಾಸದಲ್ಲಿ ಅನೇಕ ಪ್ರಮುಖ ಹಬ್ಬಗಳನ್ನು ಮತ್ತು ಉಪವಾಸ ವ್ರತಗಳನ್ನು ಆಚರಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ಮಾಸವು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ತಿಂಗಳಲ್ಲಿ ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು ಚಾತುರ್ಮಾಸ ಸಹ ಪ್ರಾರಂಭವಾಗುತ್ತದೆ. ಆಷಾಢ ಮಾಸದಲ್ಲಿ ದುರ್ಗಾದೇವಿ, ಶಿವ, ವಿಷ್ಣು ಮತ್ತು ಸೂರ್ಯದೇವನನ್ನು ಪೂಜಿಸುವ ಸಂಪ್ರದಾಯವಿದೆ. ಶಾಸ್ತ್ರೋಕ್ತವಾಗಿ ದೇವಾನುದೇವತೆಗಳನ್ನು ಪೂಜಿಸುವುದರಿಂದ ವ್ಯಕ್ತಿಯ ಇಷ್ಟಾರ್ಥಗಳೆಲ್ಲವೂ ನೆರವೇರುತ್ತವೆ ಎನ್ನುವ ನಂಬಿಕೆಯಿದೆ.
ಬಹುತೇಕ ಜನರಲ್ಲಿ ಸಾಮಾನ್ಯ ಅಭಿಪ್ರಾಯ ಏನೆಂದರೆ, ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಅಂತಿದೆ. ಆದರೆ ಈ ವಿಚಾರದಲ್ಲಿ ಅಭಿಪ್ರಾಯ ಭೇದವಿದೆ. ಇನ್ನು ಆಷಾಢ ಮಾಸದ ಮಧ್ಯದಿಂದಲೇ ದಕ್ಷಿಣಾಯನದ ಆರಂಭವಾಗುತ್ತದೆ. ದಕ್ಷಿಣಾಯನದಲ್ಲಿ ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮಾಡುವುದು ಗೌಣ. ಉತ್ತರಾಯಣದಲ್ಲಿ ಶುಭ ಕಾರ್ಯಗಳಿಗೆ ಪ್ರಾಶಸ್ತ್ಯ. ಯಾವುದೇ ಶುಭ ಕಾರ್ಯಗಳಿಗೆ ನಿಷಿದ್ಧ ಹಾಗೂ ಗೌಣ ಹೀಗೆ ಎರಡು ಬಗೆಯಲ್ಲಿ ಹೇಳಬಹುದು. ನಿಷಿದ್ಧ ಅಂದರೆ ಮಾಡಲೇಬಾರದು, ಗೌಣ ಅಂದರೆ ಇರುವುದರಲ್ಲಿಯೇ ಉತ್ತಮವಾದ ದಿನವನ್ನು ಆರಿಸಿಕೊಂಡು, ಕಾರ್ಯಕ್ರಮಗಳನ್ನು ಮಾಡಬಹುದು. ಇನ್ನೇನು ಚಾತುರ್ಮಾಸ್ಯ ಆರಂಭವಾಗುತ್ತದೆ. ಈ ಸಮಯದಲ್ಲಿ ಪರಮಾತ್ಮ ನಿದ್ರೆಯಲ್ಲಿರುತ್ತಾನೆ. ನಮ್ಮಂಥ ಸಾಮಾನ್ಯರ ತಿಳಿವಳಿಕೆಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತದೆ. ಪರಮಾತ್ಮನು ನಿದ್ರೆಯಲ್ಲಿ ಇರುವಾಗ- ಚಾತುರ್ಮಾಸ್ಯ ಪರ್ಯಂತ ಕೆಲವರು ಶುಭ ಕಾರ್ಯ ಬೇಡ ಅಂದುಕೊಳ್ಳುವುದುಂಟು.
ಆಷಾಢ ಮಾಸದಲ್ಲಿ ಸಮುದ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಚಪ್ಪಲಿ, ಛತ್ರಿ, ಉಪ್ಪನ್ನು ದಾನ ಮಾಡಿದರೆ ವಿಶೇಷ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ತ್ರಿಮೂರ್ತಿ ರೂಪ ದತ್ತಾತ್ರೇಯ ಗುರುವನ್ನು ಪೂಜಿಸುವ ದಿನವೇ ಗುರು ಪೂರ್ಣಿಮೆ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಅಂದು ಮಹಾಭಾಗವತವನ್ನು ಬರೆದ ವೇದವ್ಯಾಸರ ಜನ್ಮದಿನ. ಇದಲ್ಲದೆ ವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ ದಿನ ಎಂದೂ ಹೇಳಲಾಗುತ್ತದೆ.