ಕರ್ನಾಟಕ ರತ್ನ, ಪವರ್ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯ ನೋವು ಜನರನ್ನು ಇನ್ನೂ ಬಾಧಿಸುತ್ತಿದ್ದು, ಅಪ್ಪು ಸ್ಥಾನವನ್ನು ಅವರ ಪತ್ನಿ ಅಶ್ವಿನಿ ಅವರು ತುಂಬುತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಹಾಗೂ ಸಿನಿಮಾ ಇವೆಂಟ್ಗಳಲ್ಲಿ ಅಪ್ಪುಗೆ ತಪ್ಪದೇ ನಮನವನ್ನು ಸಲ್ಲಿಸಲಾಗುತ್ತದೆ. ಅಶ್ವಿನಿ ಅವರು ಮುಖ್ಯ ಅತಿಥಿಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದುವರೆಗೂ ಯಾರೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡದ ಅಶ್ವಿನಿ ಅವರ ಡೀಪ್ಫೇಕ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಿಡಿಗೇಡಿಯೋರ್ವ ಅತಿರೇಕ ಪ್ರದರ್ಶಿಸಿದ್ದಾನೆ.
ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಡೀಪ್ಫೇಕ್ ವಿಡಿಯೋ ಹಂಚಿಕೊಳ್ಳಲಾಗಿದ್ದು, ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 October 2024 ರಂದು ನಾನು ವಿವಾಹ ವಾಗಲಿದ್ದೇನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು, ರಾಜವಂಶದ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ ಸ್ಥಳ : ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಬರೆಯಲಾಗಿದೆ. ಟೈಟರ್ನಲ್ಲಿ ಕೇವಲ 100 ಫಾಲೋವರ್ಸ್ಅನ್ನು ಹೊಂದಿರುವ ಯೋಗೇಂದ್ರ ಎಂಬ ಹೆಸರಿನ ಈ ವ್ಯಕ್ತಿಯೂ ರಾಜವಂಶದ ಅಭಿಮಾನಿ ಮತ್ತು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಬಿನ್ನಿಪೇಟೆ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದಾನೆ. ತನ್ನ ಟ್ವಿಟರ್ ಪೋಸ್ಟ್ಗಳಲ್ಲಿ ಪ್ರತಿಯೊಬ್ಬರ ಕಾಲೆಳೆಯುವ ವಿಚಾರಗಳನ್ನು ಹಾಕಿಕೊಂಡಿದ್ದಾನೆ. ಇತ್ತ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಡೀಪ್ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೇ ಮೊದಲಲ್ಲ ಇದೇ ರೀತಿ ಮುಂಚೆಯೂ ನಡೆದಿತ್ತು, 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆರ್ಸಿಬಿ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಫ್ರಾಂಚೈಸಿ ವಿಶೇಷ ಗೌರವ ಸಲ್ಲಿಸಿತ್ತು. ಇದಾದ ಬಳಿಕ ನಡೆದ ಪಂದ್ಯಗಳಲ್ಲಿ ಆರ್ಸಿಬಿ ತಂಡವು ಸರಣಿ ಸೋಲುಗಳನ್ನು ಕಂಡಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್ ಜರ್ಸಿ ಲಾಂಚ್ ಮಾಡಿದ್ದೇ ಕಾರಣ ಎಂದು ಆಗಲೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ವಿಚಾರ ಅಶ್ವಿನಿ ಗಮನಕ್ಕೆ ಬಂದಿತ್ತು. ಏನು ಮಾಡಲು ಆಗಲ್ಲ ಎದುರಿಸಬೇಕು ಎಂದು ಹೇಳಿ ಸುಮ್ಮನಾಗಿದ್ದರು. ಇದೀಗ ಕಿಡಿಗೇಡಿಯೋರ್ವ ಈ ರೀತಿಯ ಡೀಪ್ಫೇಕ್ ವಿಡಿಯೋ ಹರಿಬಿಟ್ಟಿದ್ದು, ಈ ವಿಡಿಯೋ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ತಲುಪುವ ಮುನ್ನವೇ ಕ್ರಮ ತೆಗೆದುಕೊಳ್ಳಬೇಕು ಎಂದು ಅನೇಕರು ಬೆಂಗಳೂರು ಪೊಲೀಸ್, ಸೈಬರ್ ಕ್ರೈಂಗೆ ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ