ಪವಿತ್ರ ಇಂಟರ್ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ, ನಾಗಶೇಖರ್ ಅವರ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಂಜು ವೆಡ್ಸ್ ಗೀತಾ-2. ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ’ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಅಲ್ಲಿ ನಟ ಉಪೇಂದ್ರ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಹಾಜರಿದ್ದರು. ಕವಿರಾಜ್ ಅವರ ಸಾಹಿತ್ಯ ರಚನೆಯ ಈ ಹಾಡಿಗೆ ಶ್ರೀಧರ್ ವಿ.ಸಂಭ್ರಮ್ ಅದ್ಭುತವಾದ ಟ್ಯೂನ್ ಹಾಕಿದ್ದಾರೆ.
ಇದನ್ನು ಓದಿ:ಕೃಷ್ಣಂ ಪ್ರಣಯ ಸಖಿ ಫೇಮ್ ಜಸ್ ಕರಣ್ ಸಿಂಗ್ ಕಂಠದಲ್ಲಿ ಎದೆಗಿಳಿದ ‘ಅಂಶು’..!
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್ ನಾನು ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಳ್ಳಬೇಕಾಗಿತ್ತು. ಒಟ್ಟು 6 ಸುಂದರ ಹಾಡುಗಳು ಚಿತ್ರದಲ್ಲಿದ್ದು, ಈ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ. ಸ್ವಿಟ್ಜರ್ ಲ್ಯಾಂಡ್ ಸೈನಿಕನೊಬ್ಬ ತನ್ನ ರಾಣಿ ಸೆಲ್ವಿಕ್ ಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಪ್ರೀತಿ ಮಾಡ್ತಿರ್ತಾನೆ. ಆತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಕ್ಕೆ ಆಗ್ತಿರಲಿಲ್ಲ, ಏಕೆಂದರೆ ಆಕೆ ಮಹಾರಾಣಿ. ಆತನದು ಒನ್ ವೇ ಲವ್, ಒಮ್ಮೆ ಜರ್ಮನ್ ಸೈನಿಕರು ಸ್ವಿಟ್ಜರ್ ಲ್ಯಾಂಡ್ ಮೇಲೆ ಅಟ್ಯಾಕ್ ಮಾಡ್ತಾರೆ. ಆಗ ವೀರಾವೇಶದಿಂದ ಹೋರಾಡಿದ ಆ ಸೈನಿಕ ಅವರನ್ನು ಸೋಲಿಸಿ ವೀರಮರಣವನ್ನಪ್ಪುತ್ತಾನೆ, ತನ್ನ ರಾಣಿಗೆ ಆಕೆಯ ಕಿರೀಟವನ್ನು ಮತ್ತೆ ತಂದುಕೊಡುತ್ತಾನೆ. ಸಾಯೋ ಸಮಯದಲ್ಲಿ ಆತ ರಾಣಿಗೆ ತನ್ನ ರಕ್ತದಲ್ಲಿ “ಐ ಲವ್ ಯು ಫಾರೆವರ್” ಅಂತ ಒಂದು ಪತ್ರ ಬರೆಯುತ್ತಾನೆ. ಈ ಹಾಡು ಚಿತ್ರಕಥೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿರುತ್ತದೆ. ಈ ಸಾಂಗ್ ನಲ್ಲಿ ಮೊದಲಬಾರಿಗೆ ಆಕ್ಷನ್ ಇಟ್ಟಿದ್ದೇನೆ ಎಂದು ಹೇಳಿದರು.
ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ ಮೊದಲಬಾರಿಗೆ ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.