ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಮೆಂಟರ್ ಆಗಿ ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ನೇಮಕಗೊಂಡಿದ್ದಾರೆ.
ಐಪಿಎಲ್ 2023 ಟೂರ್ನಿ ಬಳಿಕ ಗೌತಮ್ ಗಂಭೀರ್ ಎಲ್ಎಸ್ಜಿ ಮೆಂಟರ್ ಸ್ಥಾನ ತೊರೆದು ಕೆಕೆಆರ್ ತಂಡ ಸೇರಿದ್ದರು. ಅಂದಿನಿಂದ ಲಕ್ನೋ ತಂಡದ ಮೆಂಟರ್ ಸ್ಥಾನ ಖಾಲಿ ಇತ್ತು. ಮೆಂಟರ್ ಸ್ಥಾನಕ್ಕೆ ಈಗ ಎಲ್ಎಸ್ಜಿ ಫ್ರಾಂಚೈಸಿ ಜಹೀರ್ ಖಾನ್ ಅವರನ್ನು ಕರೆ ತಂದಿದೆ. ಇನ್ನು, ಈಗಾಗಲೇ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಜಹೀರ್ ಖಾನ್ಗೆ ಎಲ್ಎಸ್ಜಿ ಮೆಂಟರ್ ಜರ್ಸಿ ಕೊಟ್ಟು ಸ್ವಾಗತಿಸಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಜಹೀರ್ ಖಾನ್ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಬಹಳ ಆಪ್ತರಾಗಿದ್ದಾರೆ.
ಜಹೀರ್ ಖಾನ್ ಮೇಲೆ ಹೆಚ್ಚು ನಿರೀಕ್ಷೆ!
ಗೌತಮ್ ಗಂಭೀರ್ ಮೆಂಟರ್ ಆಗಿದ್ದಾಗ ಲಕ್ನೋ ತಂಡ 2 ವರ್ಷ ಪ್ಲೇ ಆಫ್ ತಲುಪಿತ್ತು. ಬಳಿಕ ಗಂಭೀರ್ ಕೆಕೆಆರ್ ತಂಡ ಸೇರಿಕೊಂಡರು. ಎಲ್ಎಸ್ಜಿ ತಂಡ ಕಳೆದ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ಸ್ ತಲುಪಲು ವಿಫಲವಾಯಿತು. ಹಾಗಾಗಿ ಹಳಿ ತಪ್ಪಿರುವ ಲಕ್ನೋ ತಂಡವನ್ನು ಜಹೀರ್ ಖಾನ್ ಸರಿಪಡಿಸಲಿದ್ದಾರೆ ಎನ್ನುವ ನಿರೀಕ್ಷೆ ಭಾರೀ ಇದೆ. ಇನ್ನೂ, ಕೆ.ಎಲ್ ರಾಹುಲ್ ಜೊತೆಗೆ ಮಾತುಕತೆ ನಡೆಸದೆ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದು ರಾಹುಲ್ ಅವರಿಗೆ ದೊಡ್ಡ ಆಘಾತ ತಂದಿದೆ.