ನ್ಯಾಷನಲ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಇತ್ತೀಚೆಗೆ ಸರಳವಾಗಿ ನಡೆಯಿತು. ಈ ಬೆನ್ನಲ್ಲೇ ಈ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್ಡೇಟ್ವೊಂದು ಹೊರಬಿದ್ದಿದೆ. ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ‘ಫೈಟರ್’, ‘ಪೀಕು’ ಖ್ಯಾತಿಯ ಅಕ್ಷಯ್ ಒಬೆರಾಯ್ ಅವರು ಟಾಕ್ಸಿಕ್ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ನಟ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಚಿತ್ರತಂಡ ಒಂದು ವೆಲ್ಕಮ್ ನೋಟ್ ಅನ್ನು ಅಕ್ಷಯ್ಗೆ ನೀಡಿರುವ ಜೊತೆಗೆ ಒಂದು ವೆಲ್ಕಮ್ ಕಿಟ್ ಒಂದನ್ನು ಸಹ ನೀಡಿದೆ. ಆ ವೆಲ್ಕಮ್ ನೋಟ್ನಲ್ಲಿ, ನಿಮ್ಮನ್ನು ತಂಡಕ್ಕೆ ಸ್ವಾಗತಿಸುತ್ತಿದ್ದೇವೆ. ನಿಮ್ಮ ಪ್ರತಿಭೆ ಹಾಗೂ ಎನರ್ಜಿ ನಮ್ಮೊಂದಿಗೆ ಸೇರುತ್ತಿರುವುದು ನಮಗೆ ಖುಷಿ ತಂದಿದೆ. ನಿಮ್ಮೊಂದಿಗೆ ಸೇರಿ ಅದ್ಭುತವನ್ನು ಸೃಷ್ಟಿಸುವ ತವಕದಲ್ಲಿದ್ದೇವೆ ಎಂದು ಬರೆಯಲಾಗಿದೆ.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅಕ್ಷಯ್ ಮೂಲತಃ ಅಮೆರಿಕದ ನ್ಯೂ ಜೆರ್ಸಿಯಲ್ಲಿ ಜನಿಸಿದವರು. ನಟನಾಗಬೇಕು ಎಂಬ ಕನಸಿನಿಂದ ಮುಂಬೈ ಮಹಾನಗರಕ್ಕೆ ಕಾಲಿಟ್ಟರು. ಕಳೆದ 14 ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅಂದಹಾಗೆ, ‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್ದಾಸ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಯಶ್ ಜೊತೆ ಕೆವಿಎನ್ ಸಂಸ್ಥೆ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.